ಮುಸ್ಲಿಮರೆಂದು ಭಾವಿಸಿ ಇಬ್ಬರು ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ಮಾಡಿದ ಗೋ ರಕ್ಷಕರು

ಗ್ರೇಟರ್ ನೋಯ್ಡಾ, ಮೇ 5: ಡೈರಿ ಉದ್ಯಮಕ್ಕಾಗಿ ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರ ಮೇಲೆ ಗೋರಕ್ಷಕರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಇಲ್ಲಿನ ಜೆವಾರ್ ಎಂಬಲ್ಲಿ ನಡೆದಿದೆ.
ಗೋರಕ್ಷಕರಿಂದ ಹಲ್ಲೆಗೊಳಗಾದವರನ್ನು ಸಿರ್ಸಾ ಮಾಂಝಿಪುರ್ ನಿವಾಸಿಗಳಾದ ಜಾಬರ್ ಸಿಂಗ್ (35) ಹಾಗೂ ಭೂಪ್ ಸಿಂಗ್ ಎಂದು ಗುರುತಿಸಲಾಗಿದೆ. ಮೆಂಹ್ದಿಪುರ್ ಗ್ರಾಮದಿಂದ ಹಸು ಮತ್ತು ಕರುವೊಂದನ್ನು ಖರೀದಿಸಿ ಹಿಂದಿರುಗುತ್ತಿದ್ದ ವೇಳೆ ಮುಸ್ಲಿಮರೆಂದು ಭಾವಿಸಿದ ಗೋರಕ್ಷಕರು ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ಯಾವುದೇ ಕಾರಣವಿಲ್ಲದೆ ಏಕಾಏಕಿ ಜಾಬರ್ ಮತ್ತು ಭೂಪ್ ಸಿಂಗ್ ಮೇಲೆ ಮುಗಿಬಿದ್ದ ದುಷ್ಕರ್ಮಿಗಳು ಅಮಾನವೀಯತೆಯಿಂದ ವರ್ತಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. “ನಾವು ಹಿಂದೂಗಳು, ಡೈರಿ ಉದ್ಯಮಕ್ಕಾಗಿ ಹಸುವನ್ನು ಸಾಗಿಸುತ್ತಿದ್ದೇವೆ” ಎಂದು ಗೋಗರೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದವರನ್ನು ಬಿಟ್ಟು ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ಮುಅಝ್ಝಮ್ ಖಾನ್ ಎಂಬವರು ಮಾಹಿತಿ ನೀಡಿದ್ದು, “ಹಸು ಮತ್ತು ಕರುವೊಂದನ್ನು ಖರೀದಿಸಿ ಅವರು ಮೆಂಹ್ದಿಪುರ್ ಗ್ರಾಮದಿಂದ ಮರಳುತ್ತಿದ್ದರು. ಆಯಾಸಗೊಂಡಿದ್ದರಿಂದ ವಿಶ್ರಾಂತಿಗಾಗಿ ಮರದಡಿ ವಾಹನವನ್ನು ನಿಲ್ಲಿಸಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಮತ್ತು ಗೋರಕ್ಷಕರು ಅವರನ್ನು ಸುತ್ತುವರಿದರು. ಇಬ್ಬರನ್ನೂ ಮುಸ್ಲಿಮರೆಂದುಕೊಂಡು ಇತರರನ್ನೂ ಸ್ಥಳಕ್ಕೆ ಕರೆಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದರು” ಎಂದಿದ್ದಾರೆ.
ಈ ಸಂದರ್ಭ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನೋಯ್ಡಾದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಆರೋಪಿಗಳಾದ ಮಹೇಶ್, ಆಶಿಷ್, ಓಂಪಾಲ್ ಹಾಗೂ ಇತರ ಐವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಘಟನಾ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಜೆವಾರ್ ಪೊಲೀಸ್ ಠಾಣೆಯ ಎಸ್ ಎಚ್ ಒ ಅಜಯ್ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ.