ಗಾಂಧೀಜಿ ಕಲಿತ ಶಾಲೆ ಈಗ ಮ್ಯೂಸಿಯಂ

ರಾಜ್‌ಕೋಟ್, ಮೇ 5: ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ 164 ವರ್ಷಗಳ ಇತಿಹಾಸವಿರುವ ಆಲ್ಫ್ರೆಡ್ ಹೈಸ್ಕೂಲ್ ಈಗ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಲಿತ ಶಾಲೆ ಎಂಬುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.
ಈ ಹಿಂದೆ ರಾಜ್‌ಕೋಟ್ ಹೈಸ್ಕೂಲ್ ಎಂದು ಕರೆಯಲಾಗುತ್ತಿದ್ದ ಈ ಶಾಲೆಯನ್ನು ಬ್ರಿಟಿಷ್ ಆಡಳಿತದ ಸಂದರ್ಭ , 1853ರ ಅಕ್ಟೋಬರ್ 17ರಂದು ಸ್ಥಾಪಿಸಲಾಗಿತ್ತು. ಅಂದಿನ ದಿನದಲ್ಲಿ ಸೌರಾಷ್ಟ್ರ ವಲಯದಲ್ಲಿದ್ದ ಪ್ರಪ್ರಥಮ ಆಂಗ್ಲಮಾಧ್ಯಮ ಶಾಲೆ ಇದಾಗಿತ್ತು. ಶಾಲೆಯ ಈಗಿನ ಕಟ್ಟಡವನ್ನು 1875ರಲ್ಲಿ ಜುನಾಗಢದ ನವಾಬರು ನಿರ್ಮಿಸಿದ್ದು ಈ ಕಟ್ಟಡಕ್ಕೆ ರಾಜಕುಮಾರ ಆಲ್ಫ್ರೆಡ್ ಹೆಸರಿಡಲಾಗಿತ್ತು. ಈ ಶಾಲೆಯ ವಿದ್ಯಾರ್ಥಿಯಾಗಿದ್ದ ಮಹಾತ್ಮಾ ಗಾಂಧೀಜಿ 1887ರಲ್ಲಿ ತನ್ನ 18ನೆ ವಯಸ್ಸಿನಲ್ಲಿ ಈ ಶಾಲೆಯಿಂದ ತೇರ್ಗಡೆಯಾಗಿದ್ದರು.
ಭಾರತಕ್ಕೆ ಸ್ವಾತಂತ್ರ ದೊರೆತ ಬಳಿಕ 1947ರಲ್ಲಿ ಈ ಶಾಲೆಗೆ ಮೋಹನದಾಸ ಗಾಂಧಿ ಹೈಸ್ಕೂಲ್ ಎಂದು ಮರುನಾಮಕರಣ ಮಾಡಲಾಯಿತು. ಕಳೆದ ವರ್ಷ ರಾಜ್‌ಕೋಟ್ ಪುರಸಭೆ ಸಲ್ಲಿಸಿದ ಪ್ರಸ್ತಾವನೆಯಂತೆ ಗುಜರಾತ್ ಸರಕಾರ ಈ ಶಾಲೆಯನ್ನು ಮ್ಯೂಸಿಯಂ(ವಸ್ತು ಸಂಗ್ರಹಾಲಯ) ಆಗಿ ಪರಿವರ್ತಿಸುವ ನಿರ್ಧಾರವನ್ನು ಕೈಗೊಂಡಿತ್ತು. ಇದೀಗ ಶಾಲಾಧಿಕಾರಿಗಳು ಶಾಲೆಯಲ್ಲಿರುವ 125ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಲು ನಿರ್ಧರಿಸಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಈ ವಿದ್ಯಾರ್ಥಿಗಳಿಗೆ ಪರಿಸರದ ಯಾವುದೇ ಶಾಲೆಗೆ ಸೇರಲು ಅವಕಾಶವಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಶಾಲಾ ಕಟ್ಟಡವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಸಮಾಲೋಚಕರನ್ನು ನೇಮಿಸಲಾಗುತ್ತಿದೆ. ಯೋಜನೆಯ ವೆಚ್ಚ 10 ಕೋಟಿ ರೂ. ಆಗಿದ್ದು ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಇತರ ಪ್ರಮುಖ ಮುಖಂಡರ ಜೀವನ ಮತ್ತು ಸಾಧನೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ರಾಜ್‌ಕೋಟ್ ಪುರಸಭೆಯ ಆಯುಕ್ತ ಬಿ.ಎನ್.ಪಾಣಿ ತಿಳಿಸಿದ್ದಾರೆ.