ಬೇಕಲ: ಕಣ್ಮನ ಸೆಳೆಯುತ್ತಿರುವ ಗಾಳಿಪಟಗಳು!

ಕಾಸರಗೋಡು, ಮೇ 5: ಪ್ರವಾಸಿ ಕೇಂದ್ರವಾದ ಬೇಕಲ ಕೋಟೆಯ ಸಮುದ್ರ ಕಿನಾರೆಯ ಆಗಸದಲ್ಲಿ ಗಾಳಿ ಪಟಗಳ ರಂಗು ರಂಗಿನ ಚಿತ್ತಾರಕ್ಕೆ ಶುಕ್ರವಾರ ಸಂಜೆ ಸಾಕ್ಷಿಯಾಯಿತು. ಬೇಕಲ ಬೀಚ್ ಪಾರ್ಕ್‌ನಲ್ಲಿ ಬೇಕಲ್ ಪೋರ್ಟ್ ಲಯನ್ಸ್ ಕ್ಲಬ್ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಶುಕ್ರವಾರ ಸಂಜೆ ಉದ್ಘಾಟನೆಗೊಂಡಿತು.
ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಉತ್ಸವಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಖಾಲಿದ್ ಸಿ. ಪಾಲೆಕಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಎಸ್ಪಿ ಕೆ.ಜಿ.ಸಿಮೋನ್, ಪ್ರವಾ ಸೋದ್ಯಮ ನಿಗಮದ ನಿರ್ದೇಶಕ ಟಿ.ಕೆ.ಮನ್ಸೂರ್, ಸಿ.ಎ.ಶಿವಪ್ರಸಾದ್, ಗ್ರಾಪಂ ಅಧ್ಯಕ್ಷೆ ಇಂದಿರಾ, ಪಿ.ಕೆ.ಅಬ್ದುಲ್ಲ ಮತ್ತಿತರರು ಉಪಸ್ಥಿತರಿದ್ದರು.
ಕೇರಳದ ಮಹಾಬಲಿ, ಕಥಕ್ಕಳಿ, ಹುಲಿ, ತೆಯ್ಯಂ ಜೊತೆಗೆ ಗುಜರಾತ್‌ನ ಗಜವೀರ, ಇಂಡೋನೇಶ್ಯದ ಚಿಟ್ಟೆ... ಹೀಗೆ ದೇಶ ವಿದೇಶಗಳ ನೂರಕ್ಕೂ ಅಧಿಕ ಗಾಳಿಪಟಗಳು ಬೀಚ್‌ನಲ್ಲಿ ನೆರೆದವರ ಮನಸೂರೆಗೊಂಡಿತು.
110 ಅಡಿ ಗಾತ್ರದ ವಿಶ್ವದ ಅತೀ ದೊಡ್ಡ ಕಥಕಳಿ ಗಾಳಿಪಟ ಉತ್ಸವದ ಪ್ರಧಾನ ಆಕರ್ಷಣೆಯಾಗುತ್ತಿದೆ.
ಇದು ಕೇರಳದ ಮೊದಲ ಅಂತಾ ರಾಷ್ಟ್ರೀಯ ಗಾಳಿಪಟ ಉತ್ಸವವಾಗಿದೆ.