ವಿದೇಶಿ ದೇಣಿಗೆ ಪಟ್ಟಿ ಸಲ್ಲಿಕೆಗೆ ಎಎಪಿಗೆ ಕೇಂದ್ರ ಸೂಚನೆ

ಹೊಸದಿಲ್ಲಿ, ಮೇ 6: ಈ ತನಕ ಸ್ವೀಕರಿಸಿರುವ ಎಲ್ಲ ವಿದೇಶಿ ದೇಣಿಗೆ ವಿವರಗಳ ಪಟ್ಟಿಯನ್ನು ಮೇ 16ಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಗೃಹಸಚಿವಾಲಯವು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ನಿರ್ದೇಶನ ನೀಡಿದೆ.
ತಾನು ಈತನಕ ಸ್ವೀಕರಿಸಿರುವ ದೇಣಿಗೆಯನ್ನು ಬಹಿರಂಗಗೊಳಿಸಿದ್ದು, ಯಾವುದನ್ನೂ ಮುಚ್ಚಿಟ್ಟಿಲ್ಲ ಎಂದು ಎಎಪಿ ನಿರಂತರವಾಗಿ ಹೇಳಿಕೊಂಡು ಬರುತ್ತಿದೆ. ವಿದೇಶೀ ದೇಶಗಳಿಂದ ಹಾಗೂ ಕೆಲವು ದೇಶಗಳ ಹೆಸರಿನಲ್ಲಿ ದೇಣಿಗೆ ಸ್ವೀಕರಿಸಿರುವ ಬಗ್ಗೆ ಗೃಹ ಸಚಿವಾಲಯ ಪ್ರಶ್ನೆ ಎತ್ತಿದೆ. ಇದು ಎಎಪಿಗೆ ತೀವ್ರ ಹಿನ್ನಡೆಯಾಗಿದೆ.
‘‘ನಾವು ಏನನ್ನೂ ಅಡಗಿಸಿಟ್ಟಿಲ್ಲ. ಯಾವುದೇ ತನಿಖೆ ಎದುರಿಸಲು ಸಿದ್ಧ. ಪಕ್ಷವು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಏಜೆನ್ಸಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ವಿಷಯದ ಬಗ್ಗೆ ಕೇಂದ್ರ ಗೃಹ ವ್ಯವಹಾರ ಸಚಿವಾಲಯ ಹೈಕೋರ್ಟ್ ಮುಂದೆ ನಮಗೆ ಕ್ಲೀನ್‌ಚಿಟ್ ನೀಡಿದೆ. ಇದೀಗ ಹೊಸ ನೋಟಿಸ್‌ನ್ನು ನೀಡುತ್ತಿದೆ. ಇದರಲ್ಲಿ ರಾಜಕೀಯ ವೈಷಮ್ಯವಿರುವುದು ಸ್ಪಷ್ಟವಾಗುತ್ತಿದೆ. ದಿಲ್ಲಿಯಲ್ಲಿರುವ ಎಎಪಿ ಸರಕಾರ ಹಾಗೂ ಅದರ ಸಚಿವರ ವಿರುದ್ಧ ಕೇಂದ್ರ ಸರಕಾರ ತನ್ನ ವಿವಿಧ ಏಜೆನ್ಸಿಗಳ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ’’ ಎಂದು ಎಎಪಿ ಪಕ್ಷ ತಿಳಿಸಿದೆ.
ದಾನಿಗಳ ಪಟ್ಟಿ, ಅವರು ನೀಡಿರುವ ದೇಣಿಗೆ ಮೊತ್ತವನ್ನು ಎಎಪಿ ಪಕ್ಷ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಿದೆ.