ಗಡಿ ದಾಟಿ ಬಂದ ಪಾಕ್ ಬಾಲಕನನ್ನು ಬಂಧಿಸಿದ ಸೇನೆ

ಜಮ್ಮು, ಮೇ6: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಬಂದಿದ್ದ ಪಾಕ್ ಆಕ್ರಮಿತ ಕಾಶ್ಮೀರದ 12ರ ಹರೆಯದ ಬಾಲಕನನ್ನು ಭಾರತೀಯ ಸೇನೆ ಸೆರೆ ಹಿಡಿದಿದೆ ಎಂದು ಸೇನಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಒಳನುಳಿಸುವಿಕೆಯ ಮಾರ್ಗಗಳನ್ನು ತಿಳಿಯಲು ಹಾಗೂ ಭಾರತೀಯ ಸೇನೆಯ ಗಸ್ತಿನ ಜಾಡು ಹಿಡಿಯಲು ಪಾಕಿಸ್ತಾನ ಸೇನೆ ಹಾಗೂ ಉಗ್ರಗಾಮಿಗಳು ಈ ಬಾಲಕನನ್ನು ಭಾರತಕ್ಕೆ ಕಳುಹಿಸಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.
‘‘ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯಲ್ಲಿ ಗಸ್ತು ನಿರತರಾಗಿದ್ದ ಭಾರತೀಯ ಸೈನಿಕರು 12ರ ಹರೆಯದ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕ ಅಶ್ಫಕ್ ಅಲಿ ಚೌಹಾಣ್ ಎಂಬಾತನನ್ನು ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಬಲೂಚಿ ರೆಜಿಮೆಂಟ್‌ನ ನಿವೃತ್ತ ಸೈನಿಕನೊಬ್ಬನ ಪುತ್ರನಾಗಿರುವ ಚೌಹಾಣ್ ಎಲ್‌ಒಸಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ’’ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಭಾರತೀಯ ಸೇನೆಯು 12ರ ಬಾಲಕನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರ ಕೈಗೆ ಒಪ್ಪಿಸಿದೆ.