ದಿಲ್ಲಿ ಶಾಲೆಯ ಸಮೀಪ ಗ್ಯಾಸ್ ಸೋರಿಕೆ: 300ಕ್ಕೂ ಅಧಿಕ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ, ಮೇ 6: ದಿಲ್ಲಿಯ ತುಘಲಕ್‌ಬಾದ್ ಪ್ರದೇಶದಲ್ಲಿ ಕಂಟೈನರ್ ಡಿಪೋದಲ್ಲಿ ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಅಲ್ಲೇ ಸಮೀಪವಿರುವ ರಾಣಿ ಜಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ ಸೋರಿಕೆಯಾದ ತಕ್ಷಣ ವಿದ್ಯಾರ್ಥಿಗಳನ್ನು ಶಾಲೆಯಿಂದ ತೆರವುಗೊಳಿಸಲಾಯಿತು.
ಘಟನೆಯ ಬಳಿಕ 9 ಶಿಕ್ಷಕಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ ಗ್ಯಾಸ್ ಸೋರಿಕೆ ಘಟನೆ ನಡೆದ ತಕ್ಷಣ ರೈಲ್ವೇ ಕಾಲನಿಯಲ್ಲಿರುವ ಶಾಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ(ಎನ್‌ಡಿಆರ್‌ಎಫ್) ಧಾವಿಸಿ ಗ್ಯಾಸ್ ಲೀಕ್ ನಿಯಂತ್ರಿಸಲು ಯತ್ನಿಸುತ್ತಿದೆ. ಪೊಲೀಸರು ಗ್ಯಾಸ್ ಲೀಕ್‌ಗೆ ಕಾರಣವೇನೆಂಬ ಬಗ್ಗೆ ಪರಿಶೀಲಿಸುತ್ತಿದ್ದಾರೆ.
‘‘ಶಾಲೆಯಲ್ಲಿ ತರಗತಿ ನಡೆಯುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಕಣ್ಣು ಹಾಗೂ ಗಂಟಲಿನಲ್ಲಿ ಕಿರಿಕಿರಿ ಆಗುತ್ತಿರುವ ಬಗ್ಗೆ ದೂರು ನೀಡಿದ್ದರು. ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’’ ಎಂದು ರಾಣಿ ಜಾನ್ಸಿ ಸರ್ವೋದಯ ಕನ್ಯಾ ವಿದ್ಯಾಲಯದ ಉಪ ಪ್ರಾಂಶುಪಾಲರು ತಿಳಿಸಿದ್ದಾರೆ.





