ಸೌದಿ ಮಹಿಳೆಯರು ಇನ್ನು ಶಿಕ್ಷಣ, ಪ್ರಯಾಣ, ಚಿಕಿತ್ಸೆಗಾಗಿ ಪುರುಷರ ಅನುಮತಿ ಪಡೆಯಬೇಕಿಲ್ಲ

ರಿಯಾದ್,ಮೇ 6 : ಸೌದಿ ಅರೇಬಿಯಾದ ಮಹಿಳೆಯರಿಗೆ ತಮ್ಮ ಜೀವನಕ್ಕೆ ಸಂಬಂಧಿಸಿದಂತೆ ಕೆಲವೊಂದು ಆಯ್ಕೆಗಳನ್ನು ಮಾಡುವಲ್ಲಿ ಇದ್ದ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರವನ್ನು ತೆಗೆದುಕೊಂಡಿರುವ ಅಲ್ಲಿನ ತೀರಾ ಸಂಪ್ರದಾಯವಾದಿ ಆಡಳಿತದ ಕ್ರಮವನ್ನು ಮಹಿಳೆಯರ ಸ್ವಾತಂತ್ರ್ಯದತ್ತ ಒಂದು ಸಣ್ಣ ಹೆಜ್ಜೆಯೆಂದೇ ನಂಬಲಾಗಿದ್ದು ವ್ಯಾಪಕವಾಗಿ ಸ್ವಾಗತಿಸಲಾಗಿದೆ. ಈ ಮೂಲಕ ಅಲ್ಲಿನ ವಿವಾದಿತ ಮೇಲ್ ಗಾರ್ಡಿಯನ್ ಸಿಸ್ಟಂ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ.
ಅಲ್ಲಿನ ಮಹಿಳೆಯರು ಪ್ರಯಾಣಗೈಯಲು, ಅಧ್ಯಯನ ನಡೆಸಲು ಹಾಗೂ ಕೆಲವೊಂದು ಚಿಕಿತ್ಸೆ ಪಡೆಯಲು ತಮ್ಮ ತಂದೆ, ಪತಿ ಯಾ ಪುತ್ರನ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು ಹಾಗೂ ಅವರು ಸಾರ್ವಜನಿಕವಾಗಿ ತಿರುಗಾಡುವಾಗ ಮೈಮುಚ್ಚುವ ಕಪ್ಪು ಬಟ್ಟೆಗಳನ್ನು ಧರಿಸಬೇಕೆಂಬ ನಿಯಮ ಕೂಡ ಇತ್ತು.
ಆದರೆ ಈ ವಾರ ದೊರೆ ಸಲ್ಮಾನ್ ಆದೇಶವೊಂದನ್ನು ಹೊರಡಿಸಿ ಮಹಿಳೆಯರು ಕೂಡ ಸರಕಾರಿ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ತಮ್ಮ ಪುರುಷ ಗಾರ್ಡಿಯನ್ ಅನುಮತಿಯಿಲ್ಲದೆ ಪಡೆಯಬಹುದಾಗಿದೆ.
ನಿಯಮಗಳ ಸಡಿಲಿಕೆಯಿಂದಾಗಿ ಮಹಿಳೆಯರು ಇನ್ನು ಮುಂದೆ ತಮ್ಮ ಗಾರ್ಡಿಯನ್ ಅಥವಾ ಪೋಷಕರ ಅನುಮತಿಯಿಲ್ಲದೆಯೇ ನ್ಯಾಯಾಲಯಗಳಲ್ಲೂ ಹಾಜರಾಗಬಹುದು.
ಸೌದಿ ಅರೇಬಿಯ ತೈಲೋದ್ಯಮದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕತೆಯಲ್ಲಿ ವೈವಿಧ್ಯತೆಯನ್ನು ತರುವ ಸಲುವಾಗಿ ಹೆಚ್ಚಿನ ಮಹಿಳೆಯರನ್ನು ಕೆಲಸಗಳಲ್ಲಿ ತೊಡಗಿಸಿರುವುದು ಒಂದು ಪ್ರಮುಖ ಹೆಜ್ಜೆಯೆಂದೇ ಹೇಳಬಹುದು.
ಮೊದಲಾಗಿ 2011ರಲ್ಲಿ ಅಂದಿನ ದೊರೆ ಅಬ್ದುಲ್ಲಾ ಮಹಿಳೆಯರನ್ನು ಸರಕಾರಿ ಸಲಹಾ ಸಮಿತಿಯಾದ ಶುರಾ ಕೌನ್ಸಿಲ್ ಗೆ ಅನುಮತಿ ನೀಡಿದ್ದರು. ಇದೀಗ ಮಹಿಳೆಯರು ಮುನಿಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಮತ ಚಲಾಯಿಸಬಹುದು ಹಾಗೂ ಕೆಲ ರಿಟೇಲ್ ಹಾಗೂ ಹಾಸ್ಪಿಟಾಲಿಟಿ ಕ್ಷೇತ್ರಗಳಲ್ಲಿ ಉದ್ಯೋಗ ನಡೆಸಬಹುದಾಗಿದೆ. 2012ರಲ್ಲಿ ದೇಶದ ಮಹಿಳೆಯರಿಗೆ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶ ಕೂಡ ನೀಡಲಾಗಿತ್ತು.







