ಹೊಸ ಪಕ್ಷ ಸ್ಥಾಪನೆ ಕುರಿತು ಶಿವಪಾಲ್ ನನಗೆ ತಿಳಿಸಿಲ್ಲ: ಮುಲಾಯಂ
.jpg)
ಲಕ್ನೊ, ಮೇ 6: ಅಖಿಲ ಭಾರತ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸುವ ಮುನ್ನ ತನ್ನ ಸೋದರ ಶಿವಪಾಲ್ ಯಾದವ್ ತನ್ನೊಡನೆ ಚರ್ಚಿಸಿಲ್ಲ ಎಂದು ಸಮಾಜವಾದಿ ಪಕ್ಷದ ಪರಮೋಚ್ಛ ಮುಖಂಡ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ಶಿವಪಾಲ್ ಜೊತೆ ಭೇಟಿ ನಡೆದಿಲ್ಲ. ಪಕ್ಷ ಸ್ಥಾಪಿಸುವ ಬಗ್ಗೆ ಆತ ನನ್ನೊಡನೆ ಒಂದು ಮಾತನ್ನೂ ಹೇಳಿಲ್ಲ. ಇರಲಿ, ನಾನಾತನ ಜೊತೆ ಮಾತನಾಡುತ್ತೇನೆ ಎಂದು ಮುಲಾಯಂ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ನನ್ನ ಪ್ರಕಾರ ಪಕ್ಷ ಸ್ಥಾಪಿಸುವ ಇರಾದೆ ಬಗ್ಗೆ ಆತ ಹೇಳಿಕೆ ನೀಡಿರಬಹುದು. ನಾನಾತನ ಮನ ಒಲಿಸುತ್ತೇನೆ. ಆತನಿಗೆ ಬೇಸರವಾಗಿದೆ. ನನ್ನ ಪುತ್ರ ಅಖಿಲೇಶ್ ಶಿವಪಾಲ್‌ನನ್ನು ಯಾಕೆ ಇಷ್ಟಪಡುವುದಿಲ್ಲ ಎಂಬುದೇ ತಿಳಿಯದಾಗಿದೆ. ನನ್ನ ಒಳಿತಿಗಾಗಿ ಮತ್ತು ಪಕ್ಷಕ್ಕಾಗಿ ಹಗಲಿರುಳು ದುಡಿದಿರುವ ಸೋದರನ ಪರವಾಗಿಯೇ ನಾನು ನಿಲ್ಲುತ್ತೇನೆ ಎಂದೂ ಮುಲಾಯಂ ಸ್ಪಷ್ಟಪಡಿಸಿದ್ದಾರೆ.
ಶಿವಪಾಲ್ ನೂತನ ಪಕ್ಷ ಸ್ಥಾಪಿಸಿದರೆ ಸಮಾಜವಾದಿ ಪಕ್ಷ ಇಬ್ಬಾಗವಾದಂತೆ ಎಂಬ ಊಹಾಪೋಹದ ಬಗ್ಗೆ ಉತ್ತರಿಸಿದ ಮುಲಾಯಂ, ಪಕ್ಷದ ಅಥವಾ ಕುಟುಂಬದ ಯಾರು ಕೂಡಾ ಪಕ್ಷ ಇಬ್ಬಾಗವಾಗಲು ಬಯಸುತ್ತಿಲ್ಲ. ಪಕ್ಷವನ್ನು ಒಡೆದು ದುರ್ಬಲಗೊಳಿಸಿದರೆ ಅವರಿಗೆೀನು ಸಿಗುತ್ತೆ ಎಂದು ಪ್ರಶ್ನಿಸಿದರು.
ಶುಕ್ರವಾರವಷ್ಟೇ ಶಿವಪಾಲ್ ಯಾದವ್ ಮೂರು ತಿಂಗಳೊಳಗೆ ಮುಲಾಯಂ ನೇತೃತ್ವದಲ್ಲಿ ನೂತನ ಪಕ್ಷವೊಂದನ್ನು ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು.