ಅಹ್ಮದ್ ಖುರೇಶಿಗೆ ಜಾಮೀನು

ಮಂಗಳೂರು, ಮೇ 6: ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾರೆಂದು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಶಿಗೆ ಮಂಗಳೂರಿನ 6ನೆ ಹೆಚ್ಚುವರಿ ಸೆಷನ್ ನ್ಯಾಯಾಲಯವು ಜಾಮೀನು ನೀಡಿದೆ.
ಒಂದು ಲಕ್ಷ ರೂ.ನ ಬಾಂಡ್ ಮತ್ತು ತಿಂಗಳಿಗೆ ಮೂರು ಬಾರಿ ಸ್ಥಳೀಯ ಠಾಣೆಗೆ ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕು ಎಂಬ ಷರತ್ತಿನೊಂದಿಗೆ ನ್ಯಾಯಾಲಯದ ನ್ಯಾಯಾಧೀಶ ಪುಟ್ಟರಂಗ ಸ್ವಾಮಿ ಜಾಮೀನು ಮಂಜೂರು ಮಾಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಖುರೇಶಿ 1ನೆ, 10ನೆ ಮತ್ತು 20ನೆ ತಾರೀಖಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು. ಅಲ್ಲದೆ, ಪಾಸ್‌ಪೋರ್ಟ್ ಹೊಂದಿದ್ದರೆ ಅದನ್ನು ಠಾಣೆಗೆ ಒಪ್ಪಿಸಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಸುರತ್ಕಲ್ ಸಮೀಪದ ನಿವಾಸಿ ಪ್ರಕಾಶ್ ಪೂಜಾರಿ ಕೊಲೆಯತ್ನ ಪ್ರಕರಣದಲ್ಲಿ ಅಹ್ಮದ್ ಖುರೇಶಿಯನ್ನು ಪೊಲೀಸರು ಬಂಧಿಸಿದ್ದರು. ಸುಮಾರು 6 ದಿನಗಳ ಅಹ್ಮದ್ ಖುರೇಶಿಯನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ಎಸಗಿದ್ದು, ಆತನ ಕಿಡ್ನಿ ನಿಷ್ಕ್ರಿಯಗೊಂಡಿದೆ ಎಂದು ಖುರೇಶಿಯ ಕುಟಂಬಸ್ಥರು ಆರೋಪ ಮಾಡಿದ್ದರು. ಖುರೇಶಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.





