ಚೀನಾದ 9,000 ಪರದೆಗಳಲ್ಲಿ ‘ದಂಗಲ್’ ಬಿಡುಗಡೆ :ಮೊದಲ ದಿನವೇ 16 ಕೋಟಿ ರೂ. ಗಳಿಕೆ

ಬೀಜಿಂಗ್, ಮೇ 6: ಚೀನಾದಲ್ಲಿ ಶುಕ್ರವಾರ ಬಿಡುಗಡೆಯಾದ ಆಮಿರ್ ಖಾನ್ ಚಿತ್ರ ‘ದಂಗಲ್’ ಮೊದಲ ದಿನವೇ 16 ಕೋಟಿ ರೂಪಾಯಿ ಮೊತ್ತವನ್ನು ಕಲೆ ಹಾಕಿದೆ ಎಂದು ‘ಬಾಕ್ಸ್ ಆಫಿಸ್ ಇಂಡಿಯಾ’ ವರದಿ ಮಾಡಿದೆ.
‘‘ದಂಗಲ್ ಮೊದಲ ದಿನದಂದೇ ಚೀನಾದಲ್ಲಿ ಗರಿಷ್ಠ ಮೊತ್ತವನ್ನು ಕಲೆಹಾಕಿದೆ’’ ಎಂದು ಅದು ಹೇಳಿದೆ. ಆಮಿರ್ ಖಾನ್‌ರ 2014ರ ಚಿತ್ರ ‘ಪಿಕೆ’ ಮೊದಲ ದಿನ ಗಳಿಸಿದ ಮೊತ್ತ ‘ದಂಗಲ್’ ಚಿತ್ರದ ಅರ್ಧದಷ್ಟಾಗಿತ್ತು ಎಂದು ವರದಿ ತಿಳಿಸಿದೆ.
ಆದಾಗ್ಯೂ, ‘ದಂಗಲ್’ ಚಿತ್ರ ಚೀನಾದ್ಯಂತ 9,000 ಪರದೆಗಳಲ್ಲಿ ತೆರೆಕಂಡಿದೆ. ಆದರೆ, ‘ಪಿಕೆ’ 4,000 ಪರದೆಗಳಲ್ಲಿ ತೆರೆಕಂಡಿತ್ತು ಹಾಗೂ ಒಟ್ಟು 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕಲೆಹಾಕಿತ್ತು.
ಭಾರತದಲ್ಲಿ ‘ಬಾಹುಬಲಿ: ದ ಕನ್‌ಕ್ಲುಶನ್’ ಚಿತ್ರ ವಿಜೃಂಭಿಸುತ್ತಿರುವ ಸಮಯದಲ್ಲೇ ಚೀನಾದಲ್ಲಿ ‘ದಂಗಲ್’ ಬಿಡುಗಡೆಗೊಂಡಿದೆ. ‘ಬಾಹುಬಲಿ’ ಚಿತ್ರ ಈಗಾಗಲೇ ಭಾರತದಲ್ಲಿ 534 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಅದು ಭಾರತದಾದ್ಯಂತ 8,000 ಪರದೆಗಳಲ್ಲಿ ತೆರೆಕಂಡಿದೆ. ಇದು ದಂಗಲ್ ಚೀನಾದಲ್ಲಿ ಬಿಡುಗಡೆಯಾದ ಚಿತ್ರಮಂದಿರಗಳ ಸಂಖ್ಯೆಗಿಂತ 1,000 ಕಡಿಮೆಯಾಗಿದೆ.
ಚೀನಾದಲ್ಲಿ ‘ದಂಗಲ್’ ಉತ್ತಮ ಮೊತ್ತವನ್ನು ಕಲೆಹಾಕುವ ನಿರೀಕ್ಷೆಯನ್ನು ಬಾಕ್ಸ್ ಆಫಿಸ್ ಹೊಂದಿದೆ. ಚೀನಾದಲ್ಲಿ ಹೆಚ್ಚಿನ ಪ್ರಮಾಣದಲಿ ಆಮಿರ್ ಖಾನ್ ಅನುಯಾಯಿಗಳಿದ್ದಾರೆ.
ಆಮಿರ್ ಖಾನ್ ಕಳೆದ ತಿಂಗಳು ನಿರ್ದೇಶಕ ನಿತೇಶ್ ತಿವಾರಿ ಜೊತೆಗೆ ಚೀನಾದಲ್ಲಿ ‘ದಂಗಲ್’ಗೆ ಪ್ರಚಾರ ನೀಡಿದ್ದರು.







