ಸೈರನ್ ವಯರ್ ತುಂಡರಿಸಿದ್ದಕ್ಕೆ ಫೈನಾನ್ಸ್ ಕಂಪೆನಿ ದೂರು ನೀಡಿದ್ದು ಯಾರ ವಿರುದ್ಧ ಗೊತ್ತೇ?

ಬೆಂಗಳೂರು, ಮೇ 6: ಸೈರನ್ ವಯರನ್ನು ತುಂಡರಿಸಿದೆ ಎಂದು "ಇಲಿ"ಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ವಿಚಿತ್ರ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ವಿವರ: ಕೆಂಗೇರಿಯ ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿರುವ ಭದ್ರತಾ ಕಪಾಟಿಗೆ ಅಳವಡಿಸಿದ್ದ ಸೈರನ್ ವಯರನ್ನು ಇಲಿ ಕಡಿದು ಹಾಕಿದ್ದು, ಪರಿಣಾಮ ನಿರಂತರವಾಗಿ ಸೈರನ್ ಕೂಗಲು ಶುರು ಮಾಡಿದೆ. ಇದರಿಂದಾಗಿ ಸಮೀಪದ ಜನ ಆತಂಕಕ್ಕೊಳಗಾಗಿದ್ದಾರೆ. ಸೈರನ್ ಶಬ್ಧ ಕೇಳಿದ ಸುತ್ತಮುತ್ತಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಭದ್ರತಾ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದಾಗ ವಯರ್ ತುಂಡಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಮುತ್ತೂಟ್ ಫೈನಾನ್ಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಇದೇ ರೀತಿ ಸದ್ದು ಮಾಡಿದ್ದ ಸೈರನ್‌ನಿಂದಾಗಿ ಪೊಲೀಸರಿಗೆ ಕಂಪೆನಿ ಮುಚ್ಚಳಿಕೆ ಪತ್ರವನ್ನೂ ಸಹ ಬರೆದುಕೊಟ್ಟಿತ್ತು. ಇದೀಗ ಫೈನಾನ್ಸ್ ಸಿಬ್ಬಂದಿ ಇಲಿಯ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
Next Story





