‘ಇಸ್ಲಾಮ್ ಭಯ’ದ ಅಪಾಯದ ಬಗ್ಗೆ ಹೆಚ್ಚಿನ ತಿಳುವಳಿಕೆಗೆ ಕರೆ
ಜಿದ್ದಾ, ಮೇ 6: ‘ಇಸ್ಲಾಮ್ ಭಯ’ (ಇಸ್ಲಾಮೊಫೋಬಿಯ)ದ ಅಪಾಯಗಳ ಬಗ್ಗೆ ನಾವು ಹೆಚ್ಚಿನ ತಿಳುವಳಿಕೆಯನ್ನು ಹೊಂದಬೇಕಾದ ಅಗತ್ಯವಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಮಹಾಕಾರ್ಯದರ್ಶಿ ಯೂಸುಫ್ ಬಿನ್ ಅಹ್ಮದ್ ಅಲ್ ಒತೈಮೀನ್ ಹೇಳಿದ್ದಾರೆ.
ಈ ಸವಾಲನ್ನು ಎದುರಿಸಲು ಸಮುದಾಯಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ವಿನಿಮಯವಾಗಬೇಕಾಗಿದೆ ಎಂದು ಅವರು ನುಡಿದರು.
ಅಝರ್‌ಬೈಜಾನ್ ಬಾಕು ನಗರದಲ್ಲಿ ಇತ್ತೀಚೆಗೆ ನಡೆದ ಅಂತರ್‌ಸಂಸ್ಕೃತಿ ಮಾತುಕತೆ ಕುರಿತ ನಾಲ್ಕನೆ ವಿಶ್ವ ವೇದಿಕೆಯ ಸಭೆಯಲ್ಲಿ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಧರ್ಮಗಳು, ಸಂಸ್ಕೃತಿಗಳು ಮತ್ತು ನಾಗರಿಕತೆಗಳ ನಡುವೆ ಸಹಿಷ್ಣುತೆಯ ವೌಲ್ಯಗಳನ್ನು ಬಿತ್ತುವ ಹೊಸತನದ ಕಲ್ಪನೆಗಳಿಗೆ ಒಐಸಿ ನಿರಂತರ ಬೆಂಬಲ ನೀಡುತ್ತದೆ ಎಂದು ಅವರು ಘೋಷಿಸಿದರು.
ರಿಪಬ್ಲಿಕ್ ಆಫ್ ಅಝರ್‌ಬೈಜಾನ್‌ನ ಅಧ್ಯಕ್ಷ ಇಲ್ಹಮ್ ಅಲಿಯೆವ್‌ರ ಮುಂದಾಳುತ್ವದಲ್ಲಿ ಹಾಗೂ ಯುನೆಸ್ಕೊ, ಯುಎನ್ ಅಲಯನ್ಸ್ ಆಫ್ ಸಿವಿಲೈಝೇಶನ್ಸ್, ಯುಎನ್ ವರ್ಲ್ಡ್ ಟೂರಿಸಂ ಆರ್ಗನೈಸೇಶನ್ ಮುಂತಾದ ಸಂಘಟನೆಗಳ ಸಹಕಾರದೊಂದಿಗೆ ಸಮ್ಮೇಳನವನ್ನು ಏರ್ಪಡಿಸಲಾಗಿದೆ.







