ಶಾಲಾ ಸರ್ಟಿಫಿಕೇಟ್‌ಗಳಲ್ಲಿ ಹೆಸರು ಬದಲಾವಣೆಗೆ ನಕಾರ: ಸಿಬಿಎಸ್‌ಇ ನಿರ್ಧಾರ ಪ್ರಶ್ನಿಸಲು ಸದ್ದಾಂಗೆ ಹೈಕೋರ್ಟ್ ಅಸ್ತು

ರಾಯ್‌ಪುರ,ಮೇ 7: 10ನೆ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯ ಪ್ರಮಾಣಪತ್ರಗಳಲ್ಲಿ ತನ್ನ ಹೆಸರನ್ನು ಸಾಜೀದ್ ಹುಸೇನ್ ಎಂದು ಬದಲಿಸಬೇಕೆಂಬ ತನ್ನ ಮನವಿಯನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತಿರಸ್ಕರಿಸಿರುವುದನ್ನು ಪ್ರಶ್ನಿಸಿ, ಜಮ್‌ಶೆಡ್‌ಪುರ ಮೂಲದ ಮೆರೈನ್ ಎಂಜಿನಿಯರ್ ಸದ್ದಾಂ ಹುಸೇನ್ ಅವರ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ವಿಚಾರಣೆಗೆ ಸ್ವೀಕರಿಸಿದೆ.
ಸದ್ದಾಂ ಹುಸೇನ್ ಎಂಬ ಹೆಸರಿನ ಕಾರಣದಿಂದಾಗಿ ತನಗೆ ಉದ್ಯೋಗ ದೊರೆಯುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಹುಸೇನ್ ತನ್ನ ಹೆಸರನ್ನು ಬದಲಿಸಲು ನಿರ್ಧರಿಸಿದ್ದರು. ತನ್ನ ಹೊಸ ಹೆಸರಿನೊಂದಿಗೆ ನೂತನ ಪಾಸ್‌ಪೋಟ್, ಆಧಾರ್‌ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ಯಾನ್ ಕಾರ್ಡ್ ಪಡೆಯಲು ಹುಸೇನ್‌ಗೆ ಸಾಧ್ಯವಾಗಿತ್ತು. ಆದರೆ ಸಿಬಿಎಸ್‌ಇ ಮಂಡಳಿಯು 10 ಹಾಗೂ 12ನೆ ತರಗತಿಯ ಆತನ ಶೈಕ್ಷಣಿಕ ಪ್ರಮಾಣಪತ್ರಗಳಲ್ಲಿನ ಹೆಸರನ್ನು ಬದಲಾಯಿಸಲು ನಿರಾಕರಿಸಿತ್ತು. ಪರೀಕ್ಷಾ ಪ್ರಮಾಣಪತ್ರಗಳಲ್ಲಿ ಹೆಸರು ಬದಲಾವಣೆಗೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಅದು ಸಮಜಾಯಿಷಿ ನೀಡಿತ್ತು.
ಇರಾಕ್‌ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ನ ಹೆಸರನ್ನು ಹೊಂದಿದ್ದ ಕಾರಣಕ್ಕಾಗಿ ತನಗೆ ಉದ್ಯೋಗ ದೊರೆಯಲು ಸಾಧ್ಯವಾಗುತ್ತಿಲ್ಲವೆಂದು ಹುಸೇನ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಮಾರ್ಚ್ 17ರಂದು ಹುಸೇನ್ ಅವರ ಮನವಿಯ ಅಲಿಕೆ ನಡೆಸಿದ ನ್ಯಾಯಾಲಯವು ದೇಶದಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿ ಯಾವುದೇ ಸಮಾನಸಂಹಿತೆ ಜಾರಿಯಲ್ಲಿಲ್ಲ. ಕೆಲವು ವಂಚಕರು ಪದೇ ಪದೇ ಹೆಸರು ಬದಲಾಯಿಸುವ ಮೂಲಕ ವ್ಯವಸ್ಥೆಗೆ ಧಕಕ್ಕೆಯುಂಟು ಮಾಡುವುದರಿಂದ ವ್ಯಕ್ತಿಯ ಹೆಸರು ಬದಲಾವಣೆಗೆ ಸಂಬಂಧಿಸಿ ವಿಭಿನ್ನ ಇಲಾಖೆಗಳು, ವಿಭಿನ್ನವಾದ ನಿಯಮಗಳನ್ನು ಅಳವಡಿಸಿಕೊಂಡಿವೆ ಎಂದು ಅದು ಅಭಿಪ್ರಾಯಿಸಿತ್ತು. ಈ ಬಗ್ಗೆ ಕೇಂದ್ರ ಸರಕಾರವು ಮೇ 5ರೊಳಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ತಿಳಿಸಿತ್ತು.
ಆದಾಗ್ಯೂ, ಕೇಂದ್ರ ಸರಕಾರವು ಈ ಸಂಬಂಧವಾಗಿ ಯಾವುದೇ ಉತ್ತರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ. ಶುಕ್ರವಾರದಂದು ನ್ಯಾಯೂರ್ತಿ ಪರೇಶ್ ಕುಮಾರ್ ನೇತೃತ್ವದ ಪೀಠವು ಸರಕಾರಕ್ಕೆ ಈ ಬಗ್ಗೆ ನಾಲ್ಕು ವಾರಗಳೊಳಗೆ ಉತ್ತರಿಸಲು ಕಾಲಾವಕಾಶ ನೀಡಿದೆ. ಒಂದು ವೇಳೆ ಉತ್ತರ ನೀಡಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ. ಪ್ರಕರಣವು ಜೂನ್ 16ಂದು ನ್ಯಾಯಾಲಯದ ಮುಂದೆ ಆಲಿಕೆಗೆ ಬರಲಿದೆ.