ಯೋಗಿ ಸರಕಾರದಿಂದ ಕೇಸರಿ ತುಷ್ಠೀಕರಣ ನೀತಿ: ಮಾಯಾವತಿ

ಲಕ್ನೊ, ಮೇ 6: ಸಹರಣ್‌ಪುರದಲ್ಲಿ ಠಾಕುರ್ ಮತ್ತು ದಲಿತರ ಮಧ್ಯೆ ನಡೆದ ಘರ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ರಾಜ್ಯ ಸರಕಾರ ಕೇಸರಿ ತುಷ್ಠೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಜಪೂತ್ ದೊರೆ ಮಹಾರಾಣಾ ಪ್ರತಾಪ್ ಜನ್ಮದಿನಾಚರಣೆಯ ಅಂಗವಾಗಿ ಠಾಕುರ್ ಸಮುದಾಯದವರು ಸಹರಣ್‌ಪುರದ ಶಬೀರ್‌ಪುರ ಗ್ರಾಮದಲ್ಲಿ ಮೆರವಣಿಗೆಯೊಂದನ್ನು ಆಯೋಜಿಸಿದ್ದರು. ಈ ಮೆರವಣಿಗೆಗೆ ದಲಿತರು ಆಕ್ಷೇಪ ಸೂಚಿಸಿದಾಗ ಗಲಭೆ ಆರಂಭವಾಗಿದ್ದು ಓರ್ವ ಮೃತಪಟ್ಟಿದ್ದ ಮತ್ತು ಇತರ 15 ಮಂದಿ ಗಾಯಗೊಂಡಿದ್ದರು.
ಉತ್ತರ ಪ್ರದೇಶದಲ್ಲಿ ಜಾತಿಗಳ ಮಧ್ಯೆ ನಡೆಯುವ ಗಲಭೆಯ ಬಗ್ಗೆ ತೀವ್ರ ಕಳವಳ ಗೊಂಡಿರುವುದಾಗಿ ತಿಳಿಸಿದ ಮಾಯಾವತಿ, ಕೋಮುಗಲಭೆಯ ಬಳಿಕ ಈಗ ಜಾತಿಗಳ ಮಧ್ಯೆ ಗಲಭೆ ನಡೆಯುತ್ತಿದೆ. ಬಿಜೆಪಿಯಿಂದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ನೆಲೆಗೊಳಿಸಲು ಸಾಧ್ಯವಾಗದು ಎಂಬುದನ್ನು ಇದು ಸಾಬೀತುಗೊಳಿಸಿದೆ ಎಂದರು.ಬಿಜೆಪಿ ಸರಕಾರದ ಕೇಸರಿ ತುಷ್ಠೀಕರಣ ನೀತಿಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಹದಗೆಟ್ಟಿದೆ. ಕೊಲೆ, ಹಿಂಸಾಚಾರ ಮತ್ತು ಜಾತಿಗಳ ನಡುವೆ ಸಂಘರ್ಷ ದೈನಂದಿನ ವಿಷಯವಾಗಿದೆ ಎಂದ ಮಾಯಾವತಿ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಬಿಜೆಪಿ ಸರಕಾರ ಭರವಸೆ ಮತ್ತು ಕಾರ್ಯದ ನಡುವಿನ ಅಂತರವನ್ನು ದೂರಗೊಳಿಸಬೇಕು ಎಂದು ಹೇಳಿದರು.