ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ: 502 ಕೋಟಿ ರೂ. ಮೌಲ್ಯದ ಸರಕಾರಿ ಒತ್ತುವರಿ ಜಾಗ ತೆರವು
ಬೆಂಗಳೂರು, ಮೇ 6: ನಗರದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಒತ್ತುವರಿಯಾಗಿದ್ದ 502 ಕೋಟಿ ರೂ. ಮೌಲ್ಯದ ಸರಕಾರಿ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ನಗರದ ಯಲಹಂಕ ಬಳಿಯ ಆವಲಹಳ್ಳಿಯಲ್ಲಿ ಭೂಗಳ್ಳರು ಸುಮಾರು 33 ಎಕರೆ ಸರಕಾರಿ ಜಾಗವನ್ನು ವಶಪಡಿಸಿಕೊಂಡು, ಅಕ್ರಮ ಕಟ್ಟಡ, ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾಧಿಕಾರಿ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ. ಹಾಗೆಯೇ ಭೀಮನ ಕೊಪ್ಪೆ, ತಾವರೆಕೆರೆ ಬಳಿಯ ಕೋಟ್ಯಂತರ ರೂ.ವೌಲ್ಯದ ಸರಕಾರಿ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ವಿಟ್ಟಸಂದ್ರ ಬಳಿಯಲ್ಲಿರುವ ಸರಕಾರಿ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಿ ಕೋಟ್ಯಂತರ ರೂ. ದೋಚಲಾಗುತ್ತಿತ್ತು. ಇದರ ಮೇಲೆಯೂ ದಾಳಿ ನಡೆಸಿ ವಶಪಡಿಸಿಕೊಂಡು ಭೂಗಳ್ಳರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಒತ್ತುವರಿ ಕಾರ್ಯಾಚರಣೆಯಲ್ಲಿ ಆಯಾ ವಿಭಾಗದ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





