ಯೋಧರಿಗೆ ಕಳಪೆ ಆಹಾರ ಪೂರೈಕೆ ವಿಷಯ ಅನಗತ್ಯ ಪ್ರಚಾರದಿಂದ ಯೋಧರ ಆತ್ಮವಿಶ್ವಾಸಕ್ಕೆ ಧಕ್ಕೆ: ಹೈಕೋರ್ಟ್

ಹೊಸದಿಲ್ಲಿ, ಮೇ 6: ಸಶಸ್ತ್ರ ದಳದ ಯೋಧರಿಗೆ ಕಳಪೆ ಆಹಾರ ಪೂರೈಸುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವುದು ಯೋಧರ ಆತ್ಮವಿಶ್ವಾಸ ಕುಂದಿಸಿದೆ ಎಂದು ದಿಲ್ಲಿ ಹೈಕೋರ್ಟ್ ತಿಳಿಸಿದೆ.
ಇಂತಹ ವಿಷಯಗಳು ಯೋಧರ ಕುಟುಂಬಕ್ಕೆ ಆತಂಕ ಹುಟ್ಟಿಸುವುದರ ಜೊತೆಗೆ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಪ್ರಧಾನ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಅನು ಮಲ್ಹೋತ್ರಾ ಅವರಿದ್ದ ನ್ಯಾಯಾಲಯದ ಪೀಠವೊಂದು ತಿಳಿಸಿದೆ.
ಗಡಿ ಭಾಗದಲ್ಲಿ ಪ್ರತಿಕೂಲ ಪರಿಸ್ಥಿತಿಯ ನಡುವೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೇನಾ ಪಡೆಗಳಿಗೆ ಉತ್ತಮ ಆಹಾರ ಒದಗಿಸಿದರೆ ಅವರಲ್ಲಿ ಸುರಕ್ಷತೆಯ ಭಾವನೆ ಮೂಡುತ್ತದೆ ಎಂದು ನ್ಯಾಯಾಲಯದ ಪೀಠವು ಅಭಿಪ್ರಾಯಪಟ್ಟಿತು.
ಸಿಆರ್‌ಪಿಎಫ್‌ನಲ್ಲಿ 22 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದ ಪೂರಣ್‌ಚಂದ್ ಆರ್ಯ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಬಿಎಸ್‌ಎಫ್ ಯೋಧರಿಗೆ ಕಳಪೆ ಆಹಾರಗಳನ್ನು ಒದಗಿಸಲಾಗುತ್ತಿದೆ ಎಂದು ಆರ್ಯ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಾಲಯ, ಅರ್ಜಿದಾರರು ಕೇವಲ ಆರೋಪ ಮಾತ್ರ ಮಾಡಿದ್ದಾರೆ. ಆದರೆ ಆರೋಪವನ್ನು ಸಮರ್ಥಿಸುವ ಯಾವುದೇ ಪುರಾವೆ ನೀಡಿಲ್ಲ. ಇದು ಬೇಜವಾಬ್ದಾರಿಯ ಘಟನೆಯಾಗಿದೆ. ಅಲ್ಲದೆ ಅರ್ಜಿದಾರರು ಇಂದು ವಿಚಾರಣೆ ಸಂದರ್ಭ ಕೋರ್ಟಿಗೂ ಹಾಜರಾಗಿಲ್ಲ ಎಂದು ಅಸಮಾಧಾನ ಸೂಚಿಸಿತು.