ಮೀನು ಮಾರಾಟದ 14.6 ಲಕ್ಷ ರೂಪಾಯಿಯೊಂದಿಗೆ ಚಾಲಕ ಪರಾರಿ
ಮಂಗಳೂರು, ಮೇ 6: ಮೀನು ಮಾರಾಟದಿಂದ ಗಳಿಸಿದ 14,60,000 ರೂ. ನೊಂದಿಗೆ ಲಾರಿ ಚಾಲಕನೋರ್ವ ಪರಾರಿಯಾಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂದಾಪುರ ನಾಗೂರಿನ ಟ್ರಾನ್ಸ್‌ಪೋರ್ಟ್ ಕಂಪೆನಿಯ ಲಾರಿ ಚಾಲಕ ಅನ್ಸಾರ್ ಎಂಬಾತ ಹಣದೊಂದಿಗೆ ಪರಾರಿಯಾಗಿರುವ ಲಾರಿ ಚಾಲಕ.
ಈತ ಮೇ 3ರಂದು ಲಾರಿಯಲ್ಲಿ ಮಂಗಳೂರಿನಿಂದ ಮೀನು ಹೇರಿಕೊಂಡು ಅಶ್ಫಾಕ್ ಎಂಬಾತನೊಂದಿಗೆ ಕೇರಳಕ್ಕೆ ತೆರಳಿದ್ದ. ಕೇರಳದ ಕೊಲ್ಲಿಂಬಾಗ್‌ನಲ್ಲಿ ಸೈಫು ಎಂಬಾತನಿಗೆ ಮೀನು ಮಾರಿದ್ದು, 14.6 ಲಕ್ಷ ರೂ.ವನ್ನು ಮರಳಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾನೆ. ಶುಕ್ರವಾರ ಇವರಿಬ್ಬರು ಪಂಪ್‌ವೆಲ್ ಆಸ್ಪತ್ರೆಯೊಂದರ ಬಳಿ ಲಾರಿಯಲ್ಲಿ ಮಲಗಿದ್ದು, ಮುಂಜಾನೆ 5:30ರ ವೇಳೆಗೆ ಅನ್ಸಾರ್ ಲಾರಿಯಿಂದ ಇಳಿದು ಹೋದವ ನಾಪತ್ತೆಯಾಗಿದ್ದಾನೆ. ತುಂಬಾ ಹೊತ್ತಿನ ಬಳಿಕವೂ ಅನ್ಸಾರ್ ಬಾರದಿದ್ದನ್ನು ಗಮನಿಸಿದ ಅಶ್ಫಾಕ್ ಕೂಡಲೇ ಲಾರಿ ಮಾಲಕ ಅಬ್ದುಲ್ ರಹಿಮಾನ್ ರಿಗೆ ವಿಷಯ ತಿಳಿಸಿದ್ದಾನೆ.
ಟ್ರಾನ್ಸ್‌ಪೋರ್ಟ್ ಮಾಲಕ ಹಲವು ಕಡೆ ಹುಡುಕಾಡಿದರೂ ಅನ್ಸಾರ್ ಪತ್ತೆಯಾಗಲಿಲ್ಲ. ಬಳಿಕ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.





