ಆಪ್‌ನಲ್ಲಿ ಮತ್ತೆ ತಲೆದೋರಿದ ಬಿಕ್ಕಟ್ಟು : ಸಚಿವ ಕಪಿಲ್ ಮಿಶ್ರಾಗೆ ಸಂಪುಟದಿಂದ ಗೇಟ್‌ಪಾಸ್
ಹೊಸದಿಲ್ಲಿ, ಮೇ 6: ದಿಲ್ಲಿಯ ಪ್ರವಾಸೋದ್ಯಮ ಮತ್ತು ಜಲ ಇಲಾಖೆಯ ಸಚಿವ ಕಪಿಲ್ ಮಿಶ್ರಾರನ್ನು ಸಂಪುಟದಿಂದ ಕೈಬಿಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಬ್ಬರು ಹೊಸಬರಾದ ರಾಜೇಂದ್ರ ಗೌತಮ್ ಮತ್ತು ಕೈಲಾಶ್ ಗೆಹ್ಲೋಟ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದಾರೆ.
ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ಸೂಕ್ತವಾಗಿ ನಿಭಾಯಿಸಲು ವಿಫಲರಾದ ಕಾರಣ ಮಿಶ್ರಾರನ್ನು ಸಂಪುಟದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಕೈಲಾಶ್ ಗೆಹ್ಲೋಟ್‌ರನ್ನು ನೇಮಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ಪಕ್ಷದೊಳಗಿರುವ ಭಿನ್ನಮತಕ್ಕೂ ಸಂಪುಟ ವಿಸ್ತರಣೆಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಸಿಸೋಡಿಯಾ ಪತ್ರಿಕಾಗೋಷ್ಠಿ ನಡೆಸುವ ಕೆಲವೇ ಕ್ಷಣಗಳ ಮೊದಲು ಕಪಿಲ್ ಮಿಶ್ರಾ, ವಾಟರ್ ಟ್ಯಾಂಕರ್ ಹಗರಣದ ಬಗ್ಗೆ ಭಾರೀ ‘ಸ್ಫೋಟಕ’ ಸುದ್ದಿಯೊಂದನ್ನು ರವಿವಾರ ಬಹಿರಂಗಗೊಳಿಸುವುದಾಗಿ ಮತ್ತು ಈ ‘ಸ್ಫೋಟಕ’ ಮಾಹಿತಿಯನ್ನು ಅರವಿಂದ್ ಕೇಜ್ರಿವಾಲ್ ಗಮನಕ್ಕೆ ತಂದಿರುವುದಾಗಿ ಟ್ವೀಟ್ ಮಾಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಮಿಶ್ರಾರನ್ನು ಕೈಬಿಟ್ಟಿರುವ ಆದೇಶ ಹೊರಬಿದ್ದಿರುವುದು ಗಮನಾರ್ಹವಾಗಿದೆ.
ಕಪಿಲ್ ಮಿಶ್ರಾ ಎಎಪಿ ಮುಖಂಡ ಕುಮಾರ್ ವಿಶ್ವಾಸ್ ಅವರ ನಿಕಟವರ್ತಿಯಾಗಿದ್ದಾರೆ.









