ಭಟ್ಕಳ ತಾಪಂ ಮಾಸಿಕ ಕೆಡಿಪಿ ಸಭೆ

ಭಟ್ಕಳ, ಮೇ 6: ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಇರುವ ಕಡೆ ಸಮರ್ಪಕವಾಗಿ ನೀರು ಪೂರೈಸಲು ಹಾಗೂ ಹಾಳಾಗಿರುವ ಕುಡಿಯುವ ನೀರಿನ ಯೋಜನೆಯ ಪಂಪನ್ನು ದುರಸ್ತಿಪಡಿಸಿ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಾವಿನಕುರ್ವೆಯಲ್ಲಿ ನೀರಿನ ಅಭಾವ ತೀವ್ರಗೊಂಡಿದ್ದು, ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡು ಒಂದು ವಾರ ಕಳೆದರೂ ಇನ್ನೂ ಪೈಪ್ ಲೈನ್ ವ್ಯವಸ್ಥೆ ಆಗಿಲ್ಲ ಎಂದು ತಾಪಂ ಅಧ್ಯಕ್ಷ ಈಶ್ವರ ನಾಯ್ಕ ಪಂಚಾಯತ್‌ರಾಜ್ ಇಂಜಿನಿಯರ್ ಫಯಾಝ್ ರಲ್ಲಿ ಪ್ರಶ್ನಿಸಿದ್ದು, ಶೀಘ್ರ ಪೈಪ್ ಅಳವಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದರು. ಕಾಯ್ಕಿಣಿಯಲ್ಲೂ ಸಹ ಪಂಪ್ ಹಾಳಾಗಿ ಒಂದು ವಾರ ಕಳೆದಿದ್ದು ಇನ್ನೂ ರಿಪೇರಿ ಮಾಡಿಲ್ಲ. ಇದರಿಂದ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಆದಷ್ಟು ಬೇಗ ಪಂಪ್ ದುರಸ್ತಿ ಮಾಡಿ ನೀರು ನೀಡುವ ಕೆಲಸ ಮಾಡಿ ಎಂದು ತಾಪಂ ಅಧ್ಯಕ್ಷರು ಸೂಚಿಸಿದರು.
ಹೆಸ್ಕಾಂ ಇಂಜಿನಿಯರ್ ಶಿವಾನಂದ ನಾಯ್ಕ ಇಲಾಖೆ ಪ್ರಗತಿ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಿರುವ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ ಮಾತನಾಡಿ, ತಾಲ್ಲೂಕಿನಲ್ಲಿ ಹಲವು ಭಾಗದಲ್ಲಿ ಹೊಳೆ ಬದಿಯಲ್ಲಿ ಅನಧಿಕೃತವಾಗಿ ಪಂಪು ಅಳವಡಿಸಲಾಗಿದೆ. ಇದರಿಂದ ಹೊಳೆ ನೀರು ಬತ್ತಿ ಹೋಗಿದ್ದು, ಕುಡಿಯಲು ನೀರು ಸಾಕಾಗುತ್ತಿಲ್ಲ. ಆದಷ್ಟು ಶೀಘ್ರದಲ್ಲಿ ಅನಧಿಕೃತ ಪಂಪಿಗೆ ನೀಡಲಾದ ಸಂಪರ್ಕವನ್ನು ನಿರ್ಧಾಕ್ಷಿಣ್ಯವಾಗಿ ಕಿತ್ತು ಹಾಕಿ ಎಂದು ಹೇಳಿದರು.
ಇದಕ್ಕುತ್ತರಿಸಿದ ಇಂಜಿನಿಯರ್ ಶಿವಾನಂದ ನಾಯ್ಕ ನಮ್ಮಲ್ಲಿ ಯಾರ್ಯಾರು ಅನಧಿಕೃತ ಪಂಪ್ ಅಳವಡಿಸಿಕೊಂಡಿದ್ದಾರೆನ್ನುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಬಹುದಾಗಿದೆ ಎಂದಾಗ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಟಿ. ನಾಯ್ಕ, ಅನಧಿಕೃತ ಪಂಪ್ ಸಂಪರ್ಕ ತೆಗೆಯಲು ಯಾರೂ ದೂರು ನೀಡುವ ಅಗತ್ಯವಿಲ್ಲ. ಹೊಳೆ ಬದಿಯಲ್ಲಿ ಅನಧಿಕೃತ ಪಂಪ್ ಅಳವಡಿಸಿ ನೀರು ಹಾಯಿಸುತ್ತಿರುವುದರಿಂದಲೇ ಹೊಳೆ ಒಣಗಿ ನೀರಿನ ಅಭಾವ ಉಂಟಾಗಿದೆ ಎಂದರು.
ಕಂದಾಯ ಇಲಾಖೆಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಾಪಂ ಅಧ್ಯಕ್ಷರು ನಿಮ್ಮ ಇಲಾಖೆಗೆ ಯಾವುದೇ ಪ್ರಮಾಣ ಪತ್ರಕ್ಕೆ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿದ್ದರೂ ವಿನಾಕಾರಣ ಸತಾಯಿಸಲಾಗುತ್ತಿದೆ. ಇಲಾಖೆಯಲ್ಲಿ ಜನಸಾಮಾನ್ಯರು ನೇರವಾಗಿ ಅರ್ಜಿ ನೀಡಿದರೆ ಕೆಲವನ್ನು ವಿಳಂಬವಾಗಿ ಮಾಡಲಾಗುತ್ತಿದೆ. ಜನಸಾಮಾನ್ಯರ ಕೆಲಸಕ್ಕೆ ಸತಾಯಿಸದೇ ತ್ವರಿತಗತಿಯಲ್ಲಿ ಮಾಡಿಕೊಡಿ ಎಂದು ತಹಶೀಲ್ದಾರರ ಪರವಾಗಿ ಸಭೆಗೆ ಆಗಮಿಸಿದ ಉಪತಹಶೀಲ್ದಾರರಿಗೆ ಸೂಚಿಸಿದರು.
ಅಗತ್ಯ ದಾಖಲೆ ಇದ್ದಾಗ್ಯೂ ಮರಣ ಪ್ರಮಾಣ ಪತ್ರ ನೀಡಲು ಸತಾಯಿಸಿದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಇದಕ್ಕುತ್ತರಿಸಿದ ಉಪತಹಶೀಲ್ದಾರರು ಯಾರಿಗೂ ಸತಾಯಿಸುತ್ತಿಲ್ಲ. ದಾಖಲೆ ಸರಿಯಾಗಿದ್ದರೆ ಇಲಾಖೆಯ ನಿಯಮದಡಿಯಲ್ಲಿ ನಿಗದಿತ ಅವಧಿಯಲ್ಲೇ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.







