ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಬೆಳ್ಳಿಗೆ ತೃಪ್ತಿಪಟ್ಟ ಶಿವ ಥಾಪ

ತಾಷ್ಕೆಂಟ್, ಮೇ 6: ಫೈನಲ್ ಪಂದ್ಯದಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ನಾಲ್ಕನೆ ಶ್ರೇಯಾಂಕದ ಭಾರತದ ಬಾಕ್ಸರ್ ಶಿವಥಾಪ(60ಕೆಜಿ)ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಏಷ್ಯನ್ ಟೂರ್ನಿಯಲ್ಲಿ ಸತತ ಮೂರು ಪದಕಗಳನ್ನು ಜಯಿಸಿದ ಭಾರತದ ಮೊದಲ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಶನಿವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಸ್ಥಳೀಯ ಫೇವರಿಟ್ ಎಲ್ನೂರ್ ಅಬ್ದುರೈಮೊವ್‌ರನ್ನು ಎದುರಿಸಿದ ಶಿವ ಥಾಪ ಮೊದಲ ಸುತ್ತಿನ ಪಂದ್ಯದಲ್ಲಿ ಗಾಯಗೊಂಡರು. ಮೊದಲ ಸುತ್ತಿನ ಕೊನೆಯ ಕ್ಷಣದಲ್ಲಿ ಎದುರಾಳಿ ಎಲ್ನೂರ್ ತಲೆಯಿಂದ ಗುದ್ದಿದ ಹೊಡೆತಕ್ಕೆ ಶಿವ ಗಾಯಗೊಂಡರು. ಆಗ ರೆಫರಿ ಪಂದ್ಯವನ್ನು ಬಲವಂತವಾಗಿ ಸ್ಥಗಿತಗೊಳಿಸಿದರು.
ಚಿನ್ನದ ಪದಕ ವಂಚಿತರಾಗಿ ನಿರಾಸೆಗೊಂಡ ಶಿವ ಥಾಪ ಏಷ್ಯನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸತತ 3ನೆ ಪದಕ ಜಯಿಸಿದ ಸಾಧನೆ ಮಾಡಿದರು. ಶಿವ 2013ರಲ್ಲಿ ಚಿನ್ನ ಹಾಗೂ 2015ರ ಆವೃತ್ತಿಯ ಟೂರ್ನಿಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.
‘‘ನಾನು ಒಂದೇ ಟೂರ್ನಿಯಲ್ಲಿ ಎರಡು ಗುರಿ ತಲುಪಿದ್ದಕ್ಕೆ ಸಂತೋಷವಾಗುತ್ತಿದೆ. ಪದಕವನ್ನು ಗೆಲ್ಲುವ ಜೊತೆಗೆ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆದಿದ್ದೇನೆ. ಲೈಟ್‌ವೇಟ್ ವಿಭಾಗದಲ್ಲಿ ನನಗೆ ಲಭಿಸಿದ ಮೊದಲ ಪದಕ ಇದಾಗಿದೆ. ಆತ್ಮವಿಶ್ವಾಸವೇ ನನ್ನ ಈ ಸಾಧನೆಗೆ ಕಾರಣ’’ ಎಂದು ಅಸ್ಸಾಂ ಬಾಕ್ಸರ್ ಶಿವ ಥಾಪ ಪ್ರತಿಕ್ರಿಯಿಸಿದರು.
ಬಾಟಮ್‌ವೇಟ್(56ಕೆಜಿ) ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ಧ ಶಿವ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸತೊಡಗಿದ್ದರು.
ನನ್ನ ಕುಸ್ತಿ ವಿಭಾಗವನ್ನು ಬದಲಿಸಿದ್ದು ಒಂದು ಮಹತ್ವದ ನಿರ್ಧಾರವಾಗಿತ್ತು. ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಕ್ಕೆ ಸಂತೋಷವಿದೆ. ಕೆಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದರೂ ಲೈಟ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸುವ ಬಗ್ಗೆ ನನಗೆ ಸ್ಪಷ್ಟತೆಯಿತ್ತು ಎಂದು ಶಿವಥಾಪ ಹೇಳಿದರು.







