ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ: ಕಿವೀಸ್‌ನ್ನು ಮಣಿಸಿ ಕಂಚು ಗೆದ್ದ ಭಾರತ

ಇಪೋ, ಮೇ 6: ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ನ್ಯೂಝಿಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿರುವ ಭಾರತ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ಶನಿವಾರ ಸಂಜೆ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ರೂಪಿಂದರ್ ಪಾಲ್ ಸಿಂಗ್ ಅವಳಿ ಗೋಲುಗಳನ್ನು(17ನೆ, 27ನೆ ನಿಮಿಷ) ಬಾರಿಸಿದರು. ‘ಬರ್ತ್‌ಡೇ ಬಾಯ್’ ಎಸ್.ವಿ. ಸುನೀಲ್(48ನೆ ನಿಮಿಷ) ಹಾಗೂ ತಲ್ವಿಂದರ್ ಸಿಂಗ್(60ನೆ ನಿ.) ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ಭಾರತಕ್ಕೆ ಭರ್ಜರಿ ಜಯ ತಂದರು.
ಭಾರತ ತಂಡ ಕಳೆದ ವರ್ಷ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋಲುವ ಮೂಲಕ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.
ಕಳೆದ ವಾರ ಬ್ರಿಟನ್ ವಿರುದ್ಧ 2-2 ರಿಂದ ಡ್ರಾ ಸಾಧಿಸಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಭಾರತ ತಂಡ ನ್ಯೂಝಿಲೆಂಡ್‌ನ್ನು 3-0 ಅಂತರದಿಂದ ಮಣಿಸಿತ್ತು. ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ 1-3 ಅಂತರದಿಂದ ಶರಣಾಗಿತ್ತು. ಜಪಾನ್ ವಿರುದ್ಧ 4-3 ರಿಂದ ರೋಚಕ ಜಯ ಸಾಧಿಸಿದ್ದ ಭಾರತ ಶುಕ್ರವಾರ ನಡೆದ ಮಲೇಷ್ಯಾ ವಿರುದ್ಧ ಪಂದ್ಯವನ್ನು 0-1 ರಿಂದ ಸೋತು ಫೈನಲ್ ಅವಕಾಶದಿಂದ ವಂಚಿತವಾಗಿತ್ತು.







