ಎಡಿಬಿ ಯೋಜನೆ ಹಣ ದುರುಪಯೋಗ : ಸಾರ್ವಜನಿಕರ ಆತಂಕ
ಎಡಿಬಿ ಯೋಜನೆ ಕುರಿತು ಸಮಾಲೋಚನಾ ಸಭೆ
ಮಂಗಳೂರು, ಮೇ 6: ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್) ಮೂಲಕ ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳಿಂದ ಪ್ರತೀ ಹಂತದಲ್ಲೂ ನಾಗರಿಕರ, ತೆರಿಗೆ ಪಾವತಿದಾರರ ಹಣ ದುರುಪಯೋಗವಾಗುತ್ತಿದೆ ಎಂಬ ಆತಂಕ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
ಇಂದು ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಸಿಟಿಝನ್ ಪೋರಂ ಫೋರ್ ಮಂಗಳೂರು ಡೆವಲಪ್‌ಮೆಂಟ್ ವತಿಯಿಂದ ಎಡಿಬಿ ಯೋಜನೆ ಕುರಿತು ಆಯೋಜಿಸಲಾದ ಸಮಾಲೋಚನಾ ಸಭೆಯಲ್ಲಿ ನಾಗರಿಕರಿಂದ ಈ ಬಗ್ಗೆ ಆತಂಕ ವ್ಯಕ್ತವಾಯಿತು.
ಎಡಿಬಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಪದ್ಮನಾಭ ಉಳ್ಳಾಲ ಎಂಬವರು ಮಾತನಾಡಿ, ಎಡಿಬಿ ಯೋಜನೆಯಡಿ 2026ರವರೆಗೆ ಮಂಗಳೂರು, ಉಡುಪಿ ನಗರದ ಜನರಿಗೆ ನಿರಂತರ ನೀರು ಪೂರೈಕೆಯೂ ಸೇರಿದೆ. ಆದರೆ, ಪ್ರಸ್ತುತ ಮಂಗಳೂರು ತುಂಬೆ ಅಣೆಕಟ್ಟಿನಿಂದ 1,600 ಲಕ್ಷ ಲೀ. ನೀರು ಪಂಪ್ ಆಗುತ್ತಿದೆ. ನಗರಕ್ಕೆ ಬೇಕಿರುವ ಬೇಡಿಕೆ 1,300 ಲಕ್ಷ ಲೀ., ಉಳಿದ 300 ಲಕ್ಷ ಲೀ. ನೀರು ಎಲ್ಲಿ ಹೋಗುತ್ತಿದೆ ಎಂಬ ಮಾಹಿತಿಯೇ ಇಲ್ಲ. ಯೋಜನೆಯ ಹಂತದಲ್ಲೇ ಈ ಪರಿಸ್ಥಿತಿಯಾದರೆ, ಮುಂದೇನು ಎಂಬ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ.
ಘನತ್ಯಾಜ್ಯ ನಿರ್ವಹಣೆ ಕರ ಮೂರು ಪಟ್ಟು ಹೆಚ್ಚಾಗಿ ನಾಗರಿಕರಿಂದ ವಸೂಲು ಮಾಡಲಾಗುತ್ತಿದೆ. ಹಾಗಿದ್ದರೂ ತ್ಯಾಜ್ಯ ನಿರ್ವಹಣೆ ಮಾತ್ರ ಸಮರ್ಪಕವಾಗಿಲ್ಲ ಎಂದವರು ಹೇಳಿದರು. ಯೋಜನೆಯ ನಿಗದಿತ ಅವಧಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ತಮ್ಮ ಸಾಲ ಬಡ್ಡಿ ಸಹಿತವಾಗಿ ವಾಪಸ್ ದೊರೆಯುವ ಖಾತರಿ ಎಡಿಬಿಗೆ ಇದೆ. ಆದರೆ ಇದರಿಂದ ನಷ್ಟ ಅನುಭವಿಸಬೇಕಾದವರು ಸ್ಥಳೀಯಾಡಳಿತದ ಜತೆಗೆ ಜನತೆ ಮಾತ್ರ ಎಂದು ಎಡಿಬಿ ಪ್ರಾಯೋಜಿತ ಸಾಲ ಯೋಜನೆಯ ಎನ್‌ಜಿಒ ಟಾಸ್ಕ್‌ಫೋರ್ಸ್‌ನ ರಾಘವನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಿಟಿಝನ್ ಪೋರಂನ ನಟೇಶ್ ಉಳ್ಳಾಲ್ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಪಾತ್ರದ ಬಗ್ಗೆ ಮಾತನಾಡಿದರು. ‘ನೆರವು’ ಎಂಬ ಹೆಸರಿನಲ್ಲಿ ಎಡಿಬಿಯಡಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಅದು ನೆರವಿನ ಯೋಜನೆಯಲ್ಲ. ಬದಲಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಪಡೆಯಲಾಗುವ ಸಾಲವನ್ನು ಬಡ್ಡಿ ಸಹಿತವಾಗಿ ನಾವು ಪಾವತಿಸಬೇಕಾಗುತ್ತದೆ. ಮುಂದೆ ಈ ಸಾಲವನ್ನು ತೀರಿಸಲು ಸಾಧ್ಯವಾಗದಾಗ ನಮ್ಮ ಭೂಮಿ, ನಮ್ಮ ಸಂಪತ್ತನ್ನೇ ಅಡವಿಡಬೇಕಾದ ಪರಿಸ್ಥಿತಿಯೂ ಎದುರಾಗಬಹುದು ಎಂದವರು ಆತಂಕ ವ್ಯಕ್ತಪಡಿಸಿದರು.
ಎಡಿಬಿ ಯೋಜನೆಯಡಿ ಮಾಡಬಹುದಾದ ಕಾಮಗಾರಿಗಳನ್ನು ನಮ್ಮಲ್ಲೇ ಲಭ್ಯವಿರುವ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದು ನಮ್ಮ ಯುವ ತಂತ್ರಜ್ಞರನ್ನೇ ಬಳಸಿಕೊಂಡು ಮಾಡಲು ಸಾಧ್ಯವಿದೆ ಎಂದು ಉಳ್ಳಾಲ ಸಮ್ಮರ್ ಸ್ಯಾಂಡ್ ರೆಸಾರ್ಟ್‌ನ ಆಡಳಿತ ನಿರ್ದೇಶಕ ಅಲೋಶಿಯಸ್ ಅಲ್ಬುಕರ್ಕ್ ಅಭಿಪ್ರಾಯಿಸಿದರು. ಎಡಿಬಿ ಯೋಜನೆಯಿಂದ ಲಾಭಕ್ಕಿಂತಲೂ ನಾಗರಿಕರ ಮೇಲೆ ಹೊರೆಯೇ ಅಧಿಕ ಎಂದು ಉದ್ಯಮಿ ಸುಮಿತ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಎಡಿಬಿ ಪ್ರಾಯೋಜಿತ ಮೂಲಭೂತ ಸೌಲಭ್ಯ ಯೋಜನೆಗಳ ಕುರಿತಂತೆ ಸಂಶೋಧನಾ ವಿದ್ಯಾರ್ಥಿಗಳಾದ ಜಿಲ್ಲಿಯನ್ ಫ್ಲನಾಂಗನ್, ಅಮನ್ ಅಹ್ಮದ್ ಮತ್ತು ಮ್ಹವಾಶ್ ಸೈಯದ್ ಪರಿಚಯ ನೀಡಿದರು. ಸಿಟಿಝನ್ ಫೋರಂನ ವಿದ್ಯಾ ದಿನಕರ್ ಸ್ವಾಗತಿಸಿದರು. ಪ್ರೊ.ರಾಮಚಂದ್ರ ಭಟ್ ಚರ್ಚಾ ಕಾರ್ಯಕ್ರಮ ನಿರೂಪಿಸಿದರು.







