ಝವಾಜ್ ಚಾರಿಟೇಬಲ್ ಟ್ರಸ್ಟ್ ನ 3ನೆ ಕ್ಲೋತ್ ಬಾಕ್ಸ್‌ಗೆ ಚಾಲನೆ
ಬಡ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಮದುವೆ ವಸ್ತ್ರಗಳ ಸಂಗ್ರಹ

ಮೂಡುಬಿದಿರೆ, ಮೇ 6: ಬಡ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಉಪಯೋಗಿಸಿದ ಹಾಗೂ ಸುಸ್ಥಿತಿಯಲ್ಲಿರುವ ಬಟ್ಟೆಗಳನ್ನು ದಾನ ಮಾಡುವು ದರೊಂದಿಗೆ ಆತ್ಮಸಂತೃಪ್ತಿಯ ಜೊತೆಗೆ ದೇವ ಸಂತೃಪ್ತಿಗೂ ಪಾತ್ರವಾಗಬಹುದು ಎಂದು ಮೂಡುಬಿದಿರೆ ಟೌನ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಮುಸ್ತಫಾ ಯಮಾನಿ ಹೇಳಿದ್ದಾರೆ.
ಝವಾಜ್ ಚಾರಿಟೇಬಲ್ ಟ್ರಸ್ಟ್ ಬಡ ಹೆಣ್ಮಕ್ಕಳ ವಿವಾಹಕ್ಕೆ ನೆರವಾಗುವ ಉದ್ದೇಶದಿಂದ ಒಮ್ಮೆ ಉಪಯೋಗಿಸಿದ ಮದುವೆ ಬಟ್ಟೆಗಳ ಸಂಗ್ರಹಕ್ಕಾಗಿ ಇಡುವ 3ನೆ ಕ್ಲೋತ್ ಬಾಕ್ಸ್‌ಗೆ ಮೂಡುಬಿದಿರೆ ಡ್ರೀಮ್ ಫ್ಯಾಶನ್ ಬಟ್ಟೆ ಮಳಿಗೆಯ ಎದುರು ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಅಬುಲ್ ಆಲಾ ಪುತ್ತಿಗೆ ಮಾತನಾಡಿ, ಮಾಲ್ ಸಂಸ್ಕೃತಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬಟ್ಟೆ ಖರೀದಿಯ ಭರಾಟೆ ಹೆಚ್ಚುತ್ತಿದೆ. ಒಂದು ಕಾರ್ಯಕ್ರಮಕ್ಕೆ ಉಪಯೋಗಿಸಿದ ಬಟ್ಟೆಗಳನ್ನು ಇನ್ನೊಂದು ಕಾರ್ಯಕ್ರಮಕ್ಕೂ ತೊಡುವ ಕಾಲ ಮರೆಯಾಗಿದೆ. ಇದರಿಂದಾಗಿ ಸುಸ್ಥಿತಿಯಲ್ಲಿರುವ ಬಟ್ಟೆಗಳನ್ನು ಬಡ ಜನರಿಗೆ ತಲುಪಿಸುವ ಕಾರ್ಯ ಮಹತ್ವಪೂರ್ಣದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನಅಧ್ಯಕ್ಷ ಇಸ್ಮಾಯೀಲ್ ಕಾನ ಪ್ರಾಸ್ತಾವಿಕವಾಗಿ ಮಾತನಾಡಿ, ಬಟ್ಟೆಗಳನ್ನು ಕ್ಲಾತ್ ಬಾಕ್ಸ್‌ಗೆ ಹಾಕಿದರೆ ಅದನ್ನು ಸೂಕ್ತ ಕುಟುಂಬಗಳಿಗೆ ತಲುಪಿಸುವ ಕೆಲಸವನ್ನು ಟ್ರಸ್ಟ್‌ನ ವತಿಯಿಂದ ಮಾಡುತ್ತಿದ್ದೇವೆ. ಇದು 3ನೆ ಕ್ಲಾತ್ ಬಾಕ್ಸ್ ಆಗಿದ್ದು, ಇನ್ನು 7 ಬಾಕ್ಸ್‌ಗೆಬೇಡಿಕೆ ಇದೆ ಎಂದರು.
ಸೂರಿಂಜೆ ಮಸೀದಿಯ ಅಧ್ಯಕ್ಷ ಉಸ್ಮಾನ್ ಸೂರಿಂಜೆ, ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯಾಧ್ಯಕ್ಷ ಮಾಲಿಕ್ ಅಝೀಝ್, ಉದ್ಯಮಿ ಸಿ.ಎಚ್. ಅಬ್ದುಲ್ ಗಫೂರ್, ಹಾಸ್ಕೋ ಅಬ್ದುಲ್ ರಹಿಮಾನ್, ಪುರಸಭಾ ಸದಸ್ಯರಾದ ಅಬ್ದುಲ್ ಬಶೀರ್, ವಾಲ್ಪಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ವಾಲ್ಪಾಡಿ, ಪ್ರಭಾಕರ ಮರಾಠೆ, ಮೂಡುಬಿದಿರೆ ಟೌನ್ ಬದ್ರಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುರ್ರಹ್ಮಾನ್, ಟ್ರಸ್ಟ್‌ನ ಕೋಶಾಧಿಕಾರಿ ಅಫ್ತಾಬ್ ಬಂದರ್, ಸದಸ್ಯರಾದ ಇರ್ಫಾನ್ ಮೂಡುಬಿದಿರೆ, ಅಜ್ಮಲ್ ಕಾನ, ಮುಹಮ್ಮದ್ ಇಕ್ಬಾಲ್ ಮೂಡುಬಿದಿರೆ ಉಪಸ್ಥಿತರಿದ್ದರು.
ರಾಝಿಕ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ನೌಫಲ್ ಸಾಝ್ ಮದಕ ಸ್ವಾಗತಿಸಿದರು. ಸಂಚಾಲಕ ಸಮೀರುದ್ದೀನ್ ಪಡುಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







