ಅರ್ಜುನ ಪ್ರಶಸ್ತಿ: ಸಿಕ್ಕಿ-ಸುಮೀತ್ ರೆಡ್ಡಿ ಹೆಸರು ಶಿಫಾರಸು

ಹೊಸದಿಲ್ಲಿ, ಮೇ 6: ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಈವರ್ಷದ ಅರ್ಜುನ ಪ್ರಶಸ್ತಿಗೆ ಡಬಲ್ಸ್ ಸ್ಪೆಷಲಿಸ್ಟ್‌ಗಳಾದ ಎನ್.ಸಿಕ್ಕಿ ರೆಡ್ಡಿ ಹಾಗೂ ಬಿ.ಸುಮೀತ್ ರೆಡ್ಡಿ ಹೆಸರನ್ನು ಶಿಫಾರಸು ಮಾಡಿದೆ.
ಫೆಬ್ರವರಿಯಲ್ಲಿ ವಿವಾಹವಾಗಿರುವ ಸಿಕ್ಕಿ ಹಾಗೂ ಸುಮೀತ್ ಭಾರತದ ಪರ ಏಕರೂಪ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
‘‘ಈ ವರ್ಷದ ಅರ್ಜುನ ಪ್ರಶಸ್ತಿಗೆ ಸಿಕ್ಕಿ ಹಾಗೂ ಸುಮೀತ್ ಹೆಸರನ್ನು ಶಿಫಾರಸು ಮಾಡಿದ್ದೇವೆ. ಈಗ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಜೋಡಿಗೆ ಅರ್ಜುನ ಪ್ರಶಸ್ತಿ ಲಭಿಸುವ ವಿಶ್ವಾಸವಿದೆ. ನಮ್ಮ ಶಟ್ಲರ್‌ಗಳು ಪ್ರತಿವರ್ಷ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಾರೆ.ಕಳೆದ ವರ್ಷ ಪಿ.ವಿ.ಸಿಂಧು ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದ್ದರು’’ ಎಂದು ಬಿಎಐ ಅಧಿಕಾರಿಗಳು ತಿಳಿಸಿದ್ದಾರೆ.
ಕುಸ್ತಿಪಟುಗಳಾದ ಸಂದೀಪ್, ಹರ್ದೀಪ್ ಹೆಸರು ಶಿಫಾರಸು
ಹೊಸದಿಲ್ಲಿ, ಮೇ 6: ಫ್ರೀಸ್ಟೈಲ್ ಕುಸ್ತಿಪಟು ಸಂದೀಪ್ ಥೋಮರ್ ಹಾಗೂ ಗ್ರಿಕೊ-ರೊಮನ್ ಕುಸ್ತಿಪಟು ಹರ್‌ದೀಪ್ ಸಿಂಗ್‌ರನ್ನು ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಸಂದೀಪ್ ಕಳೆದ ವರ್ಷ ಕಾಮನ್‌ವೆಲ್ತ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮತ್ತೊಂದೆಡೆ, ಹರ್‌ದೀಪ್ ಏಷ್ಯನ್ ಕೂಟದಲ್ಲಿ ಬೆಳ್ಳಿ ಹಾಗೂ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಭಾರತದ ಕುಸ್ತಿ ಫೆಡರೇಶನ್ ಮಹಿಳಾ ವಿಭಾಗದಲ್ಲಿ ಯಾವುದೇ ಹೆಸರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಿಲ್ಲ. ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ನ್ಯಾಶನಲ್ ಕೋಚ್ ಕುಲ್‌ದೀಪ್ ಮಲಿಕ್‌ರನ್ನು ನಾಮನಿರ್ದೇಶನ ಮಾಡಲಾಗಿದೆ. ಧ್ಯಾನ್‌ಚಂದ್ ಪ್ರಶಸ್ತಿಗೆ ಸತೀಶ್ ಕುಮಾರ್, ಜೈ ಪ್ರಕಾಶ್, ಅನಿಲ್ ಕುಮಾರ್ ಹಾಗೂ ಪಿ.ಸಿ.ಸಾರಂಗ್ ಹೆಸರನ್ನು ಡಬ್ಲುಎಫ್‌ಐ ನಾಮನಿರ್ದೇಶನ ಮಾಡಿದೆ.







