ಪ್ಲೇ-ಆಫ್‌ಗೆ ತೇರ್ಗಡೆಯಾಗುವತ್ತ ಕೋಲ್ಕತಾ ಕಣ್ಣು

ಬೆಂಗಳೂರು, ಮೇ 6: ಸತತ ಸೋಲಿನಿಂದ ಒತ್ತಡಕ್ಕೆ ಸಿಲುಕಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಕಳೆದ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ವಿರುದ್ಧ ಸೋತಿರುವ ಕೆಕೆಆರ್‌ಗೆ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ಉಳಿದ ಪಂದ್ಯಗಳ ಪೈಕಿ ಎರಡರಲ್ಲಿ ಜಯ ಸಾಧಿಸಲೇಬೇಕಾಗಿದೆ.
2 ಬಾರಿಯ ಚಾಂಪಿಯನ್ ಕೋಲ್ಕತಾ 11 ಪಂದ್ಯಗಳ ಪೈಕಿ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದೆ. ಆರ್‌ಪಿಎಸ್ ಹಾಗೂ ಹೈದರಾಬಾದ್ ಕ್ರಮವಾಗಿ 14 ಹಾಗೂ 13 ಅಂಕ ಗಳಿಸಿವೆ.
ಆರ್‌ಸಿಬಿ ವಿರುದ್ಧ ಆಡಿರುವ ಕಳೆದ ಪಂದ್ಯದಲ್ಲಿ ಕೆಕೆಆರ್ 82 ರನ್‌ಗಳಿಂದ ಜಯ ಸಾಧಿಸಿತ್ತು. ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕನಿಷ್ಠ ಮೊತ್ತ(49)ಕ್ಕೆ ಆಲೌಟಾಗಿತ್ತು. ಗೌತಮ್ ಗಂಭೀರ್ ಪಡೆ ಕಳೆದ ಪಂದ್ಯದ ಪ್ರದರ್ಶನವನ್ನೇ ಪುನರಾವರ್ತಿಸಲು ನೋಡುತ್ತಿದೆ.
ಕೆಕೆಆರ್ ಮುಂದಿನ 2 ಪಂದ್ಯಗಳಲ್ಲಿ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಮುಂಬೈ(16 ಅಂಕ) ಪ್ಲೇ-ಆಫ್‌ಗೆ ತೇರ್ಗಡೆಯಾಗಿರುವ ಮೊದಲ ತಂಡ ಎನಿಸಿಕೊಂಡಿದೆ.
ಕೆಕೆಆರ್ ಕಳೆದ ಪಂದ್ಯದಲ್ಲಿ ಪುಣೆ ವಿರುದ್ಧ 4 ವಿಕೆಟ್‌ಗಳನ್ನು ಸೋತಿತ್ತು. 93 ರನ್ ಗಳಿಸಿದ್ದ ರಾಹುಲ್ ತ್ರಿಪಾಠಿ ಕೋಲ್ಕತಾಕ್ಕೆ ಶಾಕ್ ನೀಡಿದ್ದರು.
ಮತ್ತೊಂದೆಡೆ ಆರ್‌ಸಿಬಿ ತಂಡ ಈವರ್ಷದ ಐಪಿಎಲ್‌ನಲ್ಲಿ ಭಾರೀ ನಿರಾಸೆಗೊಳಿಸಿದೆ. ಈ ವರ್ಷದ ಐಪಿಎಲ್‌ನಲ್ಲಿ 4 ಬಾರಿ ಆಲೌಟಾಗಿದೆ. 12 ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಒಟ್ಟು 5 ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ. ನಾಯಕ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿಡಿವಿಲಿಯರ್ಸ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇಬ್ಬರು ಲೆಗ್-ಸ್ಪಿನ್ನರ್‌ಗಳಾದ ಸ್ಯಾಮುಯೆಲ್ ಬದ್ರೀ(9 ವಿಕೆಟ್) ಹಾಗೂ ಯುಝ್ವಾಂದ್ರ ಚಾಹಲ್(13) ತಂಡದ ಮರ್ಯಾದೆ ಕಾಪಾಡಿದ್ದಾರೆ.
ಇಂದು ಲಯನ್‌ಗೆ ಪಂಜಾಬ್ ಎದುರಾಳಿ
ಮೊಹಾಲಿ, ಎ.6: ಸತತ ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ನಡೆಯಲಿರುವ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿದ್ದ ಪಂಜಾಬ್ ಶುಕ್ರವಾರ ಆರ್‌ಸಿಬಿ ವಿರುದ್ಧ ಮತ್ತೊಂದು ಜಯ ಸಾಧಿಸಿತ್ತು. ಈ ಮೂಲಕ ಐಪಿಎಲ್ ಪ್ಲೇ-ಆಫ್‌ಗೆ ತೇರ್ಗಡೆಯಾಗುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಮೊಹಾಲಿಯಲ್ಲಿ ಡೆಲ್ಲಿ ತಂಡವನ್ನು 67 ರನ್‌ಗೆ ಆಲೌಟ್ ಮಾಡಿದ್ದ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ 138 ರನ್ ಗಳಿಸಿದ್ದರೂ 19 ರನ್‌ಗಳಿಂದ ಜಯ ಸಾಧಿಸಲು ಯಶಸ್ವಿಯಾಗಿತ್ತು.
ಪಂಜಾಬ್ ಅಂಕಪಟ್ಟಿಯಲ್ಲಿ 5ನೆ ಸ್ಥಾನದಲ್ಲಿದೆ(10 ಪಂದ್ಯ, 10 ಅಂಕ), ಗುಜರಾತ್ ತಂಡ 11 ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಜಯ ಸಾಧಿಸಿ 6 ಅಂಕ ಗಳಿಸಿದೆ. ಪ್ಲೇ-ಆಫ್ ಆಸೆಯನ್ನು ಕೈಬಿಟ್ಟಿದೆ.
ಪಂಜಾಬ್ ಪರ ಹಾಶೀಮ್ ಅಮ್ಲ ಗರಿಷ್ಠ ಸ್ಕೋರ್(316) ಗಳಿಸಿದ್ದಾರೆ. ಮಾರ್ಟಿನ್ ಗಪ್ಟಿಲ್, ಶಾನ್ ಮಾರ್ಷ್,ಮನನ್ ವೋರ, ವೃದ್ಧಿಮಾನ್ ಸಹಾ,ಅಕ್ಷರ್ ಪಟೇಲ್ ಸಂದರ್ಭೋಚಿತವಾಗಿ ಆಡುತ್ತಿದ್ದಾರೆ. ನಾಯಕ ಮ್ಯಾಕ್ಸ್‌ವೆಲ್ ಕಳಪೆ ಫಾರ್ಮ್‌ನಲ್ಲಿದ್ದು, 10 ಪಂದ್ಯಗಳಲ್ಲಿ 200 ರನ್ ಗಳಿಸಿದ್ದಾರೆ.
ಆರ್‌ಸಿಬಿ ವಿರುದ್ಧ 3 ವಿಕೆಟ್‌ಗಳನ್ನು ಕಬಳಿಸಿದ್ದ ಸಂದೀಪ್ ಶರ್ಮ ಪಂಜಾಬ್‌ನ ಶ್ರೇಷ್ಠ ಬೌಲರ್ ಆಗಿದ್ದಾರೆ. ವರುಣ್ ಆ್ಯರೊನ್, ಮೋಹಿತ್ ಶರ್ಮ, ಸ್ಪಿನ್ನರ್ ಅಕ್ಷರ್ ಪಟೇಲ್(13 ವಿಕೆಟ್) ತಂಡದ ಗೆಲುವಿನಲ್ಲಿ ಕಾಣಿಕೆ ನೀಡುತ್ತಿದ್ದಾರೆ.
ಗುಜರಾತ್ ತಂಡ ಡೆಲ್ಲಿ ವಿರುದ್ಧ ಕಳೆದ ಪಂದ್ಯದಲ್ಲಿ 208 ರನ್ ಗಳಿಸಿದ್ದ ಹೊರತಾಗಿಯೂ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ರಿಷಬ್ ಪಂತ್ ಹಾಗೂ ಸಂಜು ಸ್ಯಾಮ್ಸನ್ ಗುಜರಾತ್ ಬೌಲರ್‌ನ್ನು ಬೆಂಡೆತ್ತಿದ್ದರು. ನಾಯಕ ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಪ್ರತಿ ಬಾರಿಯೂ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಜೇಮ್ಸ್ ಫಾಕ್ನರ್ ಹಾಗೂ ರವೀಂದ್ರ ಜಡೇಜ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.
ಇಂದಿನ ಪಂದ್ಯಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್
ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು, ಸಮಯ: ಸಂಜೆ 4:00
ಕಿಂಗ್ಸ್ ಇಲೆವೆನ್ ಪಂಜಾಬ್-ಗುಜರಾತ್ ಲಯನ್ಸ್
ಸ್ಥಳ: ಪಿಸಿಎ ಸ್ಟೇಡಿಯಂ, ಮೊಹಾಲಿ. ಸಮಯ:ರಾತ್ರಿ 8:00







