3 ದಿನದೊಳಗೆ ತೆರೆದ/ನಿರುಪಯುಕ್ತ ಕೊಳವೆಬಾವಿ ಮುಚ್ಚಲು ಕಂದಾಯ ಇಲಾಖೆ ಆದೇಶ

ಬೆಂಗಳೂರು, ಮೇ 7: ಮೂರು ದಿನದೊಳಗೆ ರಾಜ್ಯದ 30 ಜಿಲ್ಲೆಗಳಲ್ಲಿರುವ ತೆರೆದ/ನಿರುಪಯುಕ್ತ ತೆರೆದ ಕೊಳವೆ ಬಾವಿ ಮುಚ್ಚುವಂತೆ ಕಂದಾಯ ಇಲಾಖೆಯ ಖಡಕ್ ಆದೇಶ ನೀಡಿದೆ.
ಎ.28ರಂದು ಕಂದಾಯ ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದು, ಆದರೆ ಕಂದಾಯ ಇಲಾಖೆ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಯಾವ ಜಿಲ್ಲೆಯಿಂದಲೂ ವರದಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಮೂರು ದಿನದೊಳಗೆ ಎಲ್ಲಾ ತೆರೆದ/ನಿರುಪಯುಕ್ತ ಕೊಳವೆಬಾವಿಗಳನ್ನು ಮುಚ್ಚುವಂತೆ ಖಡಕ್ ಸೂಚನೆ ನೀಡಿದೆ.
ಯಾವುದೇ ಜಿಲ್ಲೆಯಲ್ಲಿ ಕೊಳವೆಬಾವಿ ದುರಂತಗಳು ಸಂಭವಿಸಿದರೆ ಖುದ್ದು ಜಿಲ್ಲಾಧಿಕಾರಿಯೇ ನೇರ ಹೊಣೆ. ಜೊತೆಗೆ ಆಯಾ ಜಿಲ್ಲಾಡಳಿತದಲ್ಲಿರುವ ತೆರೆದ / ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿ ವರದಿಯನ್ನು ನೀಡಬೇಕೆಂದು ಆದೇಶಿಸಿತ್ತು. ಆದರೆ ಯಾವುದೇ ಜಿಲ್ಲೆಯಿಂದಲೂ ವರದಿ ಬಂದಿರಲಿಲ್ಲ.
ಕಂದಾಯ ಇಲಾಖೆಯ ಸರಕಾರದ ಉಪ-ಕಾರ್ಯದರ್ಶಿ ಕೆ.ಉಮಾಪತಿ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ 30 ಜಿಲ್ಲಾಧಿಕಾರಿಗಳೂ ಮೂರು ದಿನದೊಳಗೆ ತೆರೆದ / ನಿರುಪಯುಕ್ತ ಕೊಳವೆ ಬಾವಿ ಮುಚ್ಚಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.





