ಟೆಂಪೋ ಟ್ರಾವೆಲ್-ಲಾರಿ ಢಿಕ್ಕಿ: ಇಬ್ಬರು ಮೃತ್ಯು; 10 ಮಂದಿಗೆ ಗಾಯ

ಚಳ್ಳಕೆರೆ, ಮೇ 7: ಟೆಂಪೋ ಟ್ರಾವೆಲ್ ಹಾಗೂ ಲಾರಿ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮೃತಪಟ್ಟು 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಳ್ಳಕೆರೆ ತಾಲೂಕಿನ ಬುಕ್ಲಾರಹಟ್ಟಿ ಗೇಟ್ ಸಮೀಪ ನಡೆದಿದೆ.
ರವಿವಾರ ಬೆಳಗ್ಗೆ ಬೆಂಗಳೂರು ಕಡೆಯಿಂದ ಟೆಂಪೋಟ್ರಾವೆಲ್ ನಲ್ಲಿ 14 ಜನರು ರಾಂಪುರ ಸಮೀಪದ ಅಶೋಕ ಸಿದ್ದಾಪುರ ಗ್ರಾಮದಲ್ಲಿ ನಡೆಯುವ ವಿವಾಹಕ್ಕೆ ತೆರಳುವಾಗ ಬಳ್ಳಾರಿ ಕಡೆಯಿಂದ ಭತ್ತದ ಹೊಟ್ಟನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಿಂದ ಬೆಂಗಳೂರು ಮೂಲದ ಮಂಜುನಾಥ(30) ಹಾಗೂ ರೋಜ(20) ಮೃತ ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಶ್ವೇತಾ(24) ಸಂಧ್ಯಾ (24) ಹಾಗೂ ಗಿರೀಶ್ (35) ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಷಯ್ (21), ವರುಣ್ (10), ಶುಭಾ (27), ಚೈತನ್ಯ(25), ನವೀನ್(22), ಅನಿತಾ(25) ಹಾಗೂ ಜಟಂಗಿ(25) ಎಂಬವರಿಗೆ ಚಳ್ಳಕೆರೆ ಸಾರ್ವನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





