ಫೇಸ್‌ಬುಕ್ ಪೋಸ್ಟ್ ತಂದ ಕಂಟಕ: ಛತ್ತೀಸ್‌ಗಡದಲ್ಲಿ ಉಪ ಜೈಲರ್ ಅಮಾನತು

ರಾಯ್‌ಪುರ,ಮೇ 7: ಫೇಸ್‌ಬುಕ್‌ನಲ್ಲಿ ಭದ್ರತಾ ಪಡೆಯನ್ನು ವಿಮರ್ಶಿಸಿದ್ದ ರಾಯಪುರ್ ಸೆಂಟ್ರಲ್ ಜೈಲ್‌ನ ಉಪ ಜೈಲರ್ ವರ್ಷಾ ಡೋಂಗ್ರೆಯವರನ್ನು ಛತ್ತೀಸ್‌ಗಡ ಸರಕಾರ ಅಮಾನತುಗೊಳಿಸಿದೆ.
ರಾಜ್ಯದ ಗೃಹಸಚಿವ ರಾಮಸೇವಕ ಪೇಕರಾ ವರ್ಷಾ ಡೋಂಗ್ರೆ ಬರಹ ತುಂಬಾಸಂದೇಹಾಸ್ಪದವಾಗಿದೆ ಎಂದು ಹೇಳಿದ್ದಾರೆ. ಅವರಿಗೆ ಮಾವೋವಾದಿ ವಿಚಾರಗಳೊಂದಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಗೃಹಸಚಿವರು ತಿಳಿಸಿದರು.
ಛತ್ತೀಸ್‌ಗಡದ ಪೊಲೀಸ್ ಮಹಾನಿರ್ದೇಶಕ (ಜೈಲು) ಗಿರ್‌ದಾರಿ ನಾಯಕ್‌ರು " ಅವರ ವಿರುದ್ಧ ಅನೇಕ ಗಂಭೀರ ದೂರುಗಳಿವೆ. ಆದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ. ಇಡೀ ಪ್ರಕರಣದ ಕುರಿತು ಅವರಿಗೆ ನೋಟಿಸ್ ಜಾರಿಗೊಳಿಸಿ ಉತ್ತರ ಕೇಳಲಾಗಿದೆ" ಎಂದು ತಿಳಿಸಿದ್ದಾರೆ.
ರಾಯಪುರ್ ಸೆಂಟ್ರಲ್ ಜೈಲು ಉಪ ಜೈಲರ್ ವರ್ಷಾ ಡೋಂಗ್ರೆ ಕಳೆದವಾರ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿಬಸ್ತರ್‌ನಲ್ಲಿರುವ ಭದ್ರತಾ ಪಡೆಗಳ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಡೋಂಗ್ರೆ ಬಸ್ತರ್‌ನಲ್ಲಿಯೇ ವಾಸಿಸುತ್ತಿದ್ದಾರೆ. ಬಹುಶಃ ಅವರು ತನ್ನ ಅನುಭವಗಳನ್ನು ಬರೆದಿರಬಹುದು. ಆದರೆ ಸರಕಾರ ಈ ಪೋಸ್ಟ್ ವಿರುದ್ಧ ತನಿಖೆ ಆರಂಭಿಸಿದೊಡನೆ ಪೋಸ್ಟನ್ನು ತೆಗೆಯಲಾಗಿತ್ತು. ಆದರೆ ಅಷ್ಟರಲ್ಲಿ ಅದು ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ನಲ್ಲಿ ಸಾಕಷ್ಟು ವೈರಲ್ ಆಗಿ ಚರ್ಚೆಗೆ ಕಾರಣವಾಗಿತ್ತು.
ಘಟನೆಯ ನಂತರ ವರ್ಷಾ ಇಮೇಲ್ ಮಾಡಿ ರಜೆಯಲ್ಲಿ ತೆರಳಿರುವುದಾಗಿ ಸೂಚಿಸಿದ್ದಾರೆ. ಆದರೆ ರಜೆ ಮುಗಿದರೂ ಡೋಂಗ್ರೆ ಕರ್ತವ್ಯಕ್ಕೆ ಮರಳಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.