ಲಾಲೂ ಆದೇಶದಂತೆ ಬಿಜೆಪಿ ನಾಯಕನ ಮನೆಮುಂದೆ ಮುದಿಗೋವುಗಳನ್ನು ಕಟ್ಟಿದ ಆರ್ ಜೆಡಿ ಕಾರ್ಯಕರ್ತರು

ಹೊಸದಿಲ್ಲಿ, ಮೇ 7: ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಗೋವುಗಳ ಮೇಲಿನ ಕಾಳಜಿಯನ್ನು ಪರೀಕ್ಷಿಸಲು ಮುದಿ ಗೋವುಗಳನ್ನು ಅವರ ಮನೆ ಮುಂದೆ ಕಟ್ಟಿ ಹಾಕಿ ಎಂಬ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ರ ಆದೇಶವನ್ನು ಪಾಲಿಸಿರುವ ಆರ್ ಜೆಡಿ ಕಾರ್ಯಕರ್ತರ ಗುಂಪೊಂದು ಬಿಜೆಪಿ ನಾಯಕ ಚಂದೇಶ್ವರ್ ಭಾರ್ತಿಯವರ ಮನೆ ಮುಂಭಾಗ ಹಸುಗಳನ್ನು ಕಟ್ಟಿ ಹಾಕಿದೆ. ಇದರಿಂದ ವಿಚಲಿತಗೊಂಡ ಚಂದೇಶ್ವರ್ ಅವರು ಲಾಲೂ ಪ್ರಸಾದ್ ಹಾಗೂ ಇತರ ಐವರ ವಿರುದ್ಧ ಹಾಜಿಪುರ್ ಸಿವಿಲ್ ಕೋರ್ಟ್ ನಲ್ಲಿ ದೂರು ನೀಡಿದ್ದಾರೆ.
ಲಾಲೂ ಪ್ರಸಾದ್ ರ ಆದೇಶಕ್ಕನುಗುಣವಾಗಿ ಆರ್ ಜೆಡಿ ಕಾರ್ಯಕರ್ತರು ಹಸುಗಳನ್ನು ಮನೆಮುಂದೆ ಕಟ್ಟಿ ಹಾಕಿದ್ದಾರೆ ಎಂದು ತಾನು ನಂಬುವುದಾಗಿ ಚಂದೇಶ್ವರ್ ದೂರಿನಲ್ಲಿ ತಿಳಿಸಿದ್ದಾರೆ.
ನಳಂದಾ ಜಿಲ್ಲೆಯ ರಾಜ್ ಗಿರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಲಾಲೂ ಪ್ರಸಾದ್ ಯಾದವ್, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಗೋಮಾತೆಯನ್ನು ಪ್ರೀತಿಸುವುದಿಲ್ಲ. ಇದನ್ನು ಪರೀಕ್ಷಿಸಲು ಮುದಿ ಗೋವುಗಳನ್ನು ಅವರ ಮನೆಗಳ ಮುಂದೆ ಕಟ್ಟಬೇಕು ಎಂದಿದ್ದರು.
ಬಿಜೆಪಿ ನಾಯಕರು ಗೋರಕ್ಷಣೆಯ ಬಗ್ಗೆ ಮಾತನಾಡುತ್ತಾರೆ. ಆದರೆ ದನದ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುತ್ತಾರೆ ಎಂದು ಲಾಲೂ ವ್ಯಂಗ್ಯವಾಡಿದ್ದರು. ಲಾಲೂ ಪ್ರಸಾದ್ ಹೇಳಿಕೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.