ತಿರುವನಂತಪುರ:ಬಿಜೆಪಿ ನಾಯಕನ ಕಚೇರಿಗೆ ದಾಳಿ?

ತಿರುವನಂತಪುರ,ಮೇ 7: ರವಿವಾರ ನಸುಕಿನಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಶಾಸಕ ಒ.ರಾಜಗೋಪಾಲ್ ಅವರ ಇಲ್ಲಿಯ ಕಚೇರಿಯ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯು, ಈ ಕೃತ್ಯದ ಹಿಂದೆ ಸಿಪಿಎಂ ಕೈವಾಡವಿದೆ ಎಂದು ದೂರಿದೆ.
ಎರಡಂತಸ್ತಿನ ಕಟ್ಟಡದ ನೆಲ ಅಂತಸ್ತಿನಲ್ಲಿ ರಾಜಗೋಪಾಲ್ ಅವರ ಕಚೇರಿಯಿದೆ. ಸಿಪಿಎಂನ ಕಣ್ಣೂರು ಲಾಬಿಯು ಈ ದಾಳಿಗೆ ಹೊಣೆಯಾಗಿದೆ ಎಂದು ಆರೋಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕಮ್ಮಣಂ ರಾಜಶೇಖರನ್ ಅವರು, ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದರು.
ಬೈಕ್‌ನಲ್ಲಿ ಬಂದಿದ್ದ ಮೂವರು ಕಿಡಿಗೇಡಿಗಳು ಕಟ್ಟಡದ ಮೊದಲ ಅಂತಸ್ತಿನಲ್ಲಿರುವ ಅನಿಲ ಕುಮಾರ್ ಎನ್ನುವವರ ನಿವಾಸಕ್ಕೆ ಕಲ್ಲು ತೂರಾಟ ನಡೆಸಿದ್ದು, ಅವರ ಕಾರಿಗೂ ಹಾನಿಯನ್ನುಂಟು ಮಾಡಿದ್ದಾರೆ ಎಂದು ತಿಳಿಸಿದ ಪೊಲೀಸರು, ಕುಮಾರ್ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಘಟನೆಗೆ ರಾಜಕೀಯ ದ್ವೇಷ ಕಾರಣವಲ್ಲ ಎಂದು ಹೇಳಿದರು.
Next Story





