"ಐಸಿಸ್" ವಾಟ್ಸ್ಯಾಪ್ ಸಂದೇಶ: ಪೊಲೀಸರಿಗೆ ದೂರು ನೀಡಿದ ಕಾಸರಗೋಡಿನ ಯುವಕ

ಕಾಸರಗೋಡು, ಮೇ 7: ಉಗ್ರಗಾಮಿ ಸಂಘಟನೆ ಐಸಿಸ್ ಪರ ಕಾಸರಗೋಡಿನ ಯುವಕನೋರ್ವನಿಗೆ ವಾಟ್ಸ್ಯಾಪ್ ಮೂಲಕ ಸಂದೇಶವೊಂದು ಲಭಿಸಿದ್ದು, ಇದರಿಂದ ಆತಂಕಿತನಾದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.
ಕಾಸರಗೋಡಿನ ಹಾರಿಸ್ ಮಸ್ತಾನ್ ಎಂಬವರನ್ನು ಅನುಮತಿ ಇಲ್ಲದೆ ವಾಟ್ಸ್ಯಾಪ್ ಗ್ರೂಪ್ ಗೆ ಸೇರ್ಪಡೆಗೊಳಿಸಲಾಗಿದೆ. 'ಮೆಸೇಜ್ ಟು ಕೇರಳ' ಎಂಬ ಹೆಸರಿನಲ್ಲಿ ವಾಟ್ಸ್ಯಾಪ್ ಗ್ರೂಪ್ ಮಾಡಲಾಗಿದೆ. ಸಂದೇಶ ಕಂಡು ಆತಂಕಗೊಂಡ ಹಾರಿಸ್ ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಗೆ ಮಾಹಿತಿ ನೀಡಿದ್ದಾರೆ .
"ಕೇರಳದ ವಿವಿಧ ಪ್ರದೇಶಗಳಿಂದ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಇದೇ ವಾಟ್ಸ್ಯಾಪ್ ಗ್ರೂಪ್‌ಗೆ ಸದಸ್ಯರನ್ನಾಗಿ ಸೇರಿಸಲಾಗಿದೆ. ಅದರಲ್ಲಿ ನಿಮ್ಮನ್ನೂ ಒಳಪಡಿಸಲಾಗಿದೆ" ಎಂದು ಸಂದೇಶದಲ್ಲಿ ಹಾರಿಸ್ ಗೆ ತಿಳಿಸಲಾಗಿದೆ. ಸಂದೇಶ ಲಭಿಸಿದ ಕೂಡಲೇ "ಗ್ರೂಪ್‌ನ ಉದ್ದೇಶವೇನು" ಎಂದು ಪ್ರಶ್ನಿಸಿದಾಗ, "ಇಸ್ಲಾಮಿಕ್ ಸ್ಟೇಟ್‌ನ್ನು ಬೆಂಬಲಿಸುವ" ಸಂದೇಶ ಪ್ರತ್ಯುತ್ತರವಾಗಿ ತನಗೆ ಲಭಿಸಿತ್ತೆಂದು ದೂರಿನಲ್ಲಿ ಹಾರಿಸ್ ತಿಳಿಸಿದ್ದಾರೆ.
ಆ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಸಂದೇಶವು ಅಫ್ಘಾನಿಸ್ತಾನದ ನಂಬರೊಂದರಿಂದ ಬಂದದ್ದಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಹಾರಿಸ್ ಗೆ ಲಭಿಸಿದ ವಾಯ್ಸ್ ಮೆಸೇಜನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ರಾಜ್ಯ ಸ್ಪೆಷಲ್ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸ್ಪೆಷಲ್ ಬ್ರಾಂಚ್‌ನವರು ಅದನ್ನು ಪರಿಶೀಲಿಸಿದ ಬಳಿಕ ಎನ್.ಐ.ಎ.ಗೆ ಮಾಹಿತಿ ನೀಡಿದ್ದಾರೆ. ಎನ್.ಐ.ಎ ತಂಡ ಕಾಸರಗೋಡಿಗೆ ಆಗಮಿಸಿ ಆ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.







