ಪಾಟ್ನಾ ವಿವಿಯಲ್ಲಿ 2-5 ರೂ.ಗಳ ಸ್ವಾತಂತ್ರಪೂರ್ವ ಕಾಲದ ವಿದ್ಯಾರ್ಥಿ ವೇತನಗಳಿಗೆ ಪುನರುಜ್ಜೀವನ

ಪಾಟ್ನಾ,ಮೇ 7: ಬ್ರಿಟಿಷರ ಕಾಲದಿಂದಲೂ ಅಸ್ತಿತ್ವದಲ್ಲಿರುವ ಪಾಟ್ನಾ ವಿಶ್ವವಿದ್ಯಾನಿಲಯವು ಸ್ವಾತಂತ್ರಪೂರ್ವದ 30 ಕ್ಕೂ ಅಧಿಕ ವಿದ್ಯಾರ್ಥಿ ವೇತನಗಳಿಗೆ ಪುನರುಜ್ಜೀವನ ನೀಡಲು ನಿರ್ಧರಿಸಿದೆ. ಅಂದ ಹಾಗೆ ಈ ವಿದ್ಯಾರ್ಥಿ ವೇತನಗಳ ಮಾಸಿಕ ವೌಲ್ಯ 2 ರೂ.ನಿಂದ 15 ರೂ.ಗಳು!
ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಆಗಿನ ಸಂಸ್ಥಾನಗಳ ರಾಜರು, ಜಮೀನದಾರರು ಮತ್ತು ಶಿಕ್ಷಣತಜ್ಞರು ಈ ವಿದ್ಯಾರ್ಥಿವೇತನಗಳು, ಬಹುಮಾನಗಳು ಮತ್ತು ಫೆಲೊಶಿಪ್‌ಗಳನ್ನು ಕೊಡಮಾಡಿದ್ದರು.
ಪಾಟ್ನಾ ಕಾಲೇಜಿನಲ್ಲಿ ಇಂತಹ ಸುಮಾರು 15 ದತ್ತಿನಿಧಿಗಳು ನಿಷ್ಕ್ರಿಯವಾಗಿವೆ. ನಿಷ್ಕ್ರಿಯ ದತ್ತಿನಿಧಿಗಳು ಪಾಟ್ನಾ ಸೈನ್ಸ್ ಕಾಲೇಜ್,ಬಿ.ಎನ್.ಕಾಲೇಜ್ ಮತ್ತು ವಿವಿಯ ಇತರ ವಿಭಾಗಗಳಲ್ಲಿಯೂ ಇವೆ.
ಈ ವಿದ್ಯಾರ್ಥಿ ವೇತನಗಳು ಮಾಸಿಕ 2-15 ರೂ.ಗಳದ್ದಾಗಿದ್ದು, ಇವುಗಳ ಪ್ರಾಯೋಜಕರು ದತ್ತಿ ನಿಧಿಗಳನ್ನು ಅಂಚೆ ಕಚೇರಿಗಳಲ್ಲಿ ಠೇವಣಿಯಿಟ್ಟಿದ್ದರು. ಕೆಲವು ದಾನಿಗಳು ದತ್ತಿನಿಧಿಗಾಗಿ 2,000-5,000 ರೂ.ಗಳನ್ನು ನೀಡಿದ್ದರೆ, ಒಂದು ಲ.ರೂ. ನಂತಹ ದೊಡ್ಡಮೊತ್ತದ ದತ್ತಿನಿಧಿಗಳೂ ಇವೆ ಎಂದು ವಿವಿ ಮೂಲಗಳು ತಿಳಿಸಿದವು.
ಆರಂಭಿಕ ವಿದ್ಯಾರ್ಥಿ ವೇತನ ಮೊತ್ತ ಇಂದಿನ ಕಾಲದಲ್ಲಿ ತುಂಬ ಕಡಿಮೆಯಾಗ ಬಹುದು. ಕಳೆದ 40 ವರ್ಷಗಳಿಗೂ ಹೆಚ್ಚು ಅವಧಿಯಿಂದ ಇವು ನಿಷ್ಕ್ರಿಯವಾಗಿವೆ. ಹೀಗಾಗಿ ಈ ಎಲ್ಲ ವರ್ಷಗಳಲ್ಲಿ ಲಭಿಸಿರುವ ಬಡ್ಡಿಯನ್ನು ಸೇರಿಸಿ ಲೆಕ್ಕಾಚಾರಗಳನ್ನು ಅಂತಿಮಗೊಳಿಸಿದ ಬಳಿಕ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಲು ವಿವಿಯು ಚಿಂತನೆ ನಡೆಸಿದೆ ಎಂದು ಪಾಟ್ನಾ ಕಾಲೇಜಿನ ಬೋಧಕ ರಣಧೀರ ಕುಮಾರ ಸಿಂಗ್ ತಿಳಿಸಿದರು.
ಪಾರಂಪರಿಕ ದತ್ತಿನಿಧಗಳ ಸ್ಥಾನದಲ್ಲಿರುವ ಇವುಗಳನ್ನು ರಕ್ಷಿಸಿ, ಸೂಕ್ತವಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದರು.