ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ:ಇಬ್ಬರು ಬಿಹಾರಿ ಯುವಕರ ಬಂಧನ

ಮುಝಫ್‌ರಪುರ,ಮೇ 7: ದಿಲ್ಲಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಝಫ್‌ರಪುರ ಜಿಲ್ಲೆಯ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಅರ್ಚಕರೋರ್ವರ ಪುತ್ರ ಆಕಾಶ ಕುಮಾರ್(19) ಮತ್ತು ತರಕಾರಿ ಸಗಟು ವ್ಯಾಪಾರಿಯ ಮಗ ಶಿವಂ (18) ಬಂಧಿತ ಯುವಕರಾಗಿದ್ದು, ಇಬ್ಬರೂ ಜಿಲ್ಲೆಯ ಬ್ರಹ್ಮಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ದಿಲ್ಲಿಯಲ್ಲಿ ಓದುತ್ತಿದ್ದು, ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಆರೋಪಿಗಳು ಸಂತ್ರಸ್ತ ಬಾಲಕಿಯ ನೆರೆಕರೆಯಲ್ಲಿ ವಾಸವಾಗಿದ್ದು ಆಕೆಯನ್ನು ತಮ್ಮ ರೂಮಿಗೆ ಕರೆಸಿ ಇನ್ನೋರ್ವನ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಮುಝಫ್‌ರಪುರ ಎಸ್‌ಎಸ್‌ಪಿ ವಿವೇಕ ಕುಮಾರ್ ಅವರು ರವಿವಾರ ಸುದ್ದಿಗಾರರಿಗೆ ತಿಳಿಸಿದರು.
ಬಾಲಕಿಯ ತಾಯಿ ಪೂರ್ವ ದಿಲ್ಲಿಯ ಸಹಕಾರಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಆರೋಪಿಗಳನ್ನು ಹೆಸರಿಸಿದ್ದಳು. ಆರೋಪಿಗಳ ರೂಮ್‌ಮೇಟ್ ನಿಂದ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡ ದಿಲ್ಲಿ ಪೊಲೀಸರು ತನಿಖೆ ನಡೆಸಿದಾಗ ಅವರು ಮುಝಫ್‌ರಪುರದಲ್ಲಿದ್ದಾರೆ ಎನ್ನುವುದು ಗೊತ್ತಾಗಿತ್ತು. ದಿಲ್ಲಿ ಪೊಲೀಸರ ಮಾಹಿತಿಯ ಮೇರೆಗೆ ಇಬ್ಬರನ್ನೂ ಬಂಧಿಸಲಾಗಿದ್ದು, ದಿಲ್ಲಿ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ ಎಂದು ಅವರು ವಿವರಿಸಿದರು.





