ಯೂಸುಫ್ ಪಠಾಣ್ ದಾಖಲೆ ಸರಿಗಟ್ಟಿದ ನರೇನ್
ಐಪಿಎಲ್‌ನಲ್ಲಿ 15 ಎಸೆತಗಳಲ್ಲಿ ಅರ್ಧಶತಕ

ಬೆಂಗಳೂರು, ಮೇ 7: ಕೋಲ್ಕತಾ ನೈಟ್ ರೈಡರ್ಸ್‌ನ ಪಿಂಚ್ ಹಿಟ್ಟಿಂಗ್ ಓಪನರ್ ಸುನೀಲ್ ನರೇನ್ ಐಪಿಎಲ್ ಟ್ವೆಂಟಿ-20 ಟೂರ್ನಿಯ ಇತಿಹಾಸದಲ್ಲಿ 15 ಎಸೆತಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ತಮ್ಮದೇ ತಂಡದ ಆಲ್‌ರೌಂಡರ್ ಯೂಸುಫ್ ಪಠಾಣ್(15 ಎಸೆತ,50 ರನ್) ದಾಖಲೆಯನ್ನು ಸರಿಗಟ್ಟಿದ್ದಾರೆ. ಪಠಾಣ್ 2014ರಲ್ಲಿ ಹೈದರಾಬಾದ್ ವಿರುದ್ಧ ಈ ಸಾಧನೆ ಮಾಡಿದ್ದರು.
ನರೇನ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಐಪಿಎಲ್‌ನ 46ನೆ ಪಂದ್ಯದಲ್ಲಿ ಆರ್‌ಸಿಬಿ ವಿರುದ್ದ ಈ ಸಾಧನೆ ಮಾಡಿದರು. ಗೆಲುವಿಗೆ 159 ರನ್ ಗುರಿ ಪಡೆದಿದ್ದ ಕೆಕೆಆರ್ ತಂಡದ ಪರ ಕ್ರಿಸ್ ಲಿನ್ ರೊಂದಿಗೆ ಇನಿಂಗ್ಸ್ ಆರಂಭಿಸಿದ ನರೇನ್ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಕೇವಲ 15 ಎಸೆತಗಳಲ್ಲಿ 50 ರನ್ ಪೂರೈಸಿದರು. ತಮ್ಮದೇ ದೇಶದ ಸ್ಯಾಮುಯೆಲ್ ಬದ್ರೀ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ನರೇನ್, ಅರವಿಂದ್ ಬೌಲಿಂಗ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ನರೇನ್ ಅವರು ಲಿನ್ ಜೊತೆಗೂಡಿ ಪವರ್-ಪ್ಲೇಯಲ್ಲಿ 105 ರನ್ ಕಲೆ ಹಾಕಿದರು. ಐಪಿಎಲ್‌ನ ಪವರ್ ಪ್ಲೇ ವೇಳೆ ದಾಖಲಾದ ಗರಿಷ್ಠ ಸ್ಕೋರ್ ಇದಾಗಿದೆ.
ನರೇನ್ 17 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ಗಳ ಸಹಿತ 54 ರನ್ ಗಳಿಸಿ ಅಂಕಿತ್ ಚೌಧರಿಗೆ ವಿಕೆಟ್ ಒಪ್ಪಿಸಿದರು





