ಆರೆಸ್ಸೆಸ್ ಕಾರ್ಯಕ್ರಮದಲ್ಲೇ ಆರೆಸ್ಸೆಸ್ಸಿಗರಿಗೆ ಮುರುಘಾ ಶರಣರಿಂದ ಸೌಹಾರ್ದದ ಪಾಠ
"ಮುಸ್ಲಿಮರನ್ನು ಸಂದೇಹದಿಂದ ನೋಡುವುದನ್ನು ನಿಲ್ಲಿಸಿ"

ದಾವಣಗೆರೆ, ಮೇ 7: ಎಲ್ಲಾ ಧರ್ಮೀಯರನ್ನು ಜೊತೆಗಿರಿಸದೆ ಸಮಗ್ರ, ಸುಭದ್ರ ಭಾರತ ಕಟ್ಟಲು ಸಾಧ್ಯವಿಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆರೆಸ್ಸೆಸ್ ನ ಶಿಕ್ಷಾ ವರ್ಗ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಭದ್ರ, ವೈಭವದ ದೇಶ ಕಟ್ಟಲು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕಿದೆ. ಮುಸ್ಲಿಮರನ್ನು ಸಂದೇಹದಿಂದ ನೋಡುವುದನ್ನು ನಿಲ್ಲಿಸಬೇಕಿದೆ ಎಂದರು. ಆರೆಸ್ಸೆಸ್ ಕಾರ್ಯಕ್ರಮದಲ್ಲೇ ಆರೆಸ್ಸೆಸ್ ಮುಖಂಡರಿಗೆ ಮುರುಘಾ ಶರಣರು ಸೌಹಾರ್ದದ ಪಾಠ ಮಾಡಿರುವುದು ವಿಶೇಷವಾಗಿತ್ತು. ಕೆಲವು ಆರೆಸ್ಸೆಸ್ ನಾಯಕರಿಗೆ ಇದರಿಂದಾಗಿ ತೀವ್ರ ಮುಜುಗರ ಉಂಟಾಯಿತು.
"ನಾನು ಮುಸ್ಲಿಮರ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಅವರು ಎಂದೂ ದೇಶ ವಿರೋಧಿಯಾಗಿ ನಡೆದುಕೊಂಡಿಲ್ಲ. ಬದಲಿಗೆ ದೇಶದ ಕುರಿತಂತೆ ಆ ಕಾರ್ಯಕ್ರಮಗಳಲ್ಲಿ ಅಪಾರ ಬದ್ಧತೆಯನ್ನು ಮೆರೆದಿದ್ದಾರೆ. ನಮ್ಮ ದೇಶ ಒಗ್ಗೂಡಿಕೊಂಡು ಹೋಗಬೇಕಾದರೆ ಬುದ್ಧನ ಮಾನವತಾವಾದ, ಬಸವಣ್ಣನವರ ಜಾತಿ ನಿರ್ಮೂಲನೆ ತತ್ವ, ಅಂಬೇಡ್ಕರರ ಸಮಬಾಳು-ಸಮಪಾಲು ತತ್ವನ್ನು ಅನುಸರಿಸಬೇಕು. ಆಗ ಮಾತ್ರ ದೇಶದ ಐಕ್ಯತೆ ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಂಘದ ಪ್ರಮುಖ ತಿಪ್ಪೇಸ್ವಾಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.







