ಭಡ್ತಿ ಮೀಸಲಾತಿ ಕಲ್ಪಿಸಲು ‘ಸುಗ್ರಿವಾಜ್ಞೆ ಜಾರಿಗೆ’ ಆಗ್ರಹಿಸಿ ಇಂದು ಪರಿಶಿಷ್ಟ ನೌಕರರ ಬೃಹತ್ ರ್ಯಾಲಿ
ಬೆಂಗಳೂರು, ಮೇ 7: ಪರಿಶಿಷ್ಟರಿಗೆ ಭಡ್ತಿ ಮೀಸಲಾತಿ ಕಲ್ಪಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿ ಇಂದು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಮೇ 8ರ ಬೆಳಗ್ಗೆ 11 ಗಂಟೆಗೆ ನಗರದ ಕೇಂದ್ರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಬೃಹತ್ ರ್ಯಾಲಿ ನಡೆಯಲಿದ್ದು, ಅದೇ ಸ್ಥಳದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಸಂವಿಧಾನ ಬದ್ಧ ಹಕ್ಕುಗಳ ಉಳಿವಿಗಾಗಿ ಮತ್ತು ಮುಂದಿನ ಪೀಳಿಗೆಯ ರಕ್ಷಣೆಗಾಗಿ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ತಿಳಿಸಿದ್ದಾರೆ.
ಶಿಕ್ಷಣ, ಉದ್ಯೋಗ ಮತ್ತು ಮುಂಭಡ್ತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ನಿಯಮಗಳನ್ನು ಸಂವಿಧಾನದ ಅನುಚ್ಛೇದ 9ರಲ್ಲಿ ಸೇರಿಸಬೇಕು. ಜಾತಿವಾರು ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಕಲ್ಪಿಸಬೇಕು. ಲೋಕಸಭೆಯಲ್ಲಿಯೂ ಭಡ್ತಿ ಮೀಸಲು ಮಸೂದೆ ಮಂಡಿಸಲು ಕೇಂದ್ರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೀಸಲಾತಿ ಪರಿಶಿಷ್ಟರಿಗೆ ಸಂವಿಧಾನ ಕಲ್ಪಿಸಿರುವ ಹಕ್ಕು, ಅದು ಭಿಕ್ಷೆಯಲ್ಲ. ಹೀಗಾಗಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದು ಸಾಗತಾರ್ಹ. ಆದರೆ, ಹಿಂಭಡ್ತಿ ಆತಂಕಕ್ಕೆ ಸಿಲುಕಿರುವ ಪರಿಶಿಷ್ಟ ನೌಕರರಿಗೆ ಹಿತರಕ್ಷಣೆಗೆ ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಲಾಗುವುದು ಎಂದು ಶಿವಶಂಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







