ಗುಂಪು ಘರ್ಷಣೆಗಳಿಗೆ ಸಾಕ್ಷಿಯಾಗಿದ್ದ ಸಹರಾನಪುರದಲ್ಲಿ ತಣಿಯದ ಉದ್ವಿಗ್ನತೆ

ಸಹರಾನಪುರ,ಮೇ 7: ಶುಕ್ರವಾರ ದಲಿತರು ಮತ್ತು ಮೇಲ್ಜಾತಿಯ ಠಾಕೂರರ ನಡುವೆ ಘರ್ಷಣೆಗಳಿಗೆ ಸಾಕ್ಷಿಯಾಗಿದ್ದ ಸಹರಾನಪುರದಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಉತ್ತರ ಪ್ರದೇಶದ ಪೊಲೀಸ್ ವರಿಷ್ಠ ಸುಲ್ಖನ್ ಸಿಂಗ್ ಅವರು ರವಿವಾರ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಘರ್ಷಣೆಗಳಲ್ಲಿ ಓರ್ವ ಮೃತಪಟ್ಟಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇದು ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಎರಡನೇ ಅತಿ ದೊಡ್ಡ ಜಾತಿ ಘರ್ಷಣೆಯಾಗಿದೆ.
ದಲಿತರು ಶನಿವಾರ ಸಹರಾನಪುರದಲ್ಲಿ ಭಾರೀ ಪ್ರತಿಭಟನೆ ನಡೆಸಿ ಘಟನೆಯು ನಡೆದಿರುವ ಶಬ್ಬೀರಪುರ ಗ್ರಾಮದ ಮೇಲ್ಜಾತಿಗಳ ಜನರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ರಜಪೂತ ದೊರೆ ಮಹಾರಾಣಾ ಪ್ರತಾಪ್ ಅವರ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆಯಲ್ಲಿ ಧ್ವನಿವರ್ಧಕಗಳ ಬಳಕೆಗೆ ದಲಿತರು ಆಕ್ಷೇಪಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಗ್ರಾಮದಲ್ಲಿಯ ಅಂಬೇಡ್ಕರ್ ವಿಗ್ರಹಕ್ಕೆ ಹಾನಿಯನ್ನುಂಟು ಮಾಡಲಾಗಿದೆ ಎಂಬ ವದಂತಿಗಳೂ ಹರಡಿದ್ದವು ಎಂದು ವರದಿಗಳು ತಿಳಿಸಿವೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಉ.ಪ್ರ.ಸರಕಾರವು ಹೇಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ 17 ಜನರನ್ನು ಬಂಧಿಸಲಾಗಿದೆ. ಠಾಕೂರ್‌ಗಳಿಂದ ಆರು,ದಲಿತ ವ್ಯಕ್ತಿಯಿಂದ ಒಂದು ಮತ್ತು ಪೊಲೀಸರಿಂದ ಒಂದು ಎಫ್‌ಐಆರ್‌ಗಳು ಈವರೆಗೆ ದಾಖಲಾಗಿವೆ.
ಆಡಳಿತವು ಸಂಪೂರ್ಣವಾಗಿ ವಿಫಲಗೊಂಡಿದೆ. ಅಗತ್ಯ ಅನುಮತಿಯಿಲ್ಲದೆ ಮೆರವಣಿಗೆಗಳನ್ನು ಹೊರಡಿಸಲಾಗುತ್ತಿದೆ. ಇದು ದ್ವೇಷ ರಾಜಕೀಯವಾಗಿದೆ. ಮುಖ್ಯಮಂತ್ರಿ ಅದಿತ್ಯನಾಥರು ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಯಾರೂ ಅದಕ್ಕೆ ಕಿವಿಗೊಡುತ್ತಿರುವಂತೆ ಕಾಣುತ್ತಿಲ್ಲ ಎಂದು ಸಹರಾನಪುರದ ಹಿರಿಯ ಕಾಂಗ್ರೆಸ ನಾಯಕ ಇಮ್ರಾನ್ ಮಸೂದ್ ಟೀಕಿಸಿದರೆ, ಸರಕಾರವು ಕೇಸರಿ ರಾಜಕೀಯದಲ್ಲಿ ತೊಡಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದರು.







