ಮೂಡುಬಿದಿರೆ: ದಿ. ಮೌಲಾನ ಇ.ಎಂ. ಶಾಫಿ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆ

ಮೂಡುಬಿದಿರೆ, ಮೇ 7: ಅಂಬೇಡ್ಕರ್ ಅವರನ್ನು ಭಾವಚಿತ್ರಕ್ಕೆ ಹಾರಹಾಕುವುದಕ್ಕಷ್ಟೇ ಸೀಮಿತಗೊಳಿಸದೆ ಅವರ ಜೀವನಾದರ್ಶ ಹಾಗೂ ತತ್ವಚಿಂತನೆಗಳನ್ನು ಹಿಂದುಳಿದ ಸಮಾಜ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕ ಪ್ರಾಧಿಕಾರಗಳಿಂದ ಅಂಬೇಡ್ಕರ್ ಅವರ ಚಿಂತನೆಗಳನ್ನೊಳಗೊಂಡ ಪುಸ್ತಕಗಳನ್ನು ವಿತರಣೆ ಮಾಡದೆ, ಉದ್ದೇಶಪೂರ್ವಕವಾಗಿ ದಫನ ಮಾಡಲಾಗುತ್ತಿದೆ. ಗ್ರಂಥಾಲಯಗಳ ಮೂಲಕ ಅವರ ಚಿಂತನೆಗಳನ್ನು ಸಮಾಜದ ಹಿಂದುಳಿದ ವರ್ಗಕ್ಕೆ ತಲುಪಿಸಿದಲ್ಲಿ ಆ ಸಮಾಜಕ್ಕೆ ಅಂಬೇಡ್ಕರ್ ಆದರ್ಶಗಳು ದಾರಿದೀಪವಾಗಬಲ್ಲದು ಎಂದು "ವಾರ್ತಾಭಾರತಿ" ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.
ಅಂಬೇಡ್ಕರ್ ಅಭಿವೃದ್ಧಿ ಸಂಘ ಗೌತಮ್‌ನಗರ ಇದರ ಆಶ್ರಯದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಾಗೂ ಪುತ್ತಿಗೆ ಸಹೋದರರಿಂದ ಗೌತಮ್‌ನಗರ ಕಾನದಲ್ಲಿ ನಿರ್ಮಿಸಲಾಗಿರುವ ದಿ. ಮೌಲಾನ ಇ.ಎಂ. ಶಾಫಿ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರುಖಿಯಾ ಶಾಫಿ ಪುತ್ತಿಗೆ ದಿ. ಮೌಲಾನ ಇ.ಎಂ. ಶಾಫಿ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳುವಾಯಿ ಗ್ರಾಪಂ ಅಧ್ಯಕ್ಷ ಭಾಸ್ಕರ ಆಚಾರ್ಯ ಮಾತನಾಡಿ, "ಕೋಶ ಓದಿ ನೋಡು-ದೇಶ ಸುತ್ತಿ ನೋಡು" ಎಂಬ ಮಾತಿಗೆ ಅನ್ವಯಿಸುವಂತೆ ಅಂಬೇಡ್ಕರ್ ಅವರು ಬದುಕಿ ಸಮಾಜಕ್ಕೆ ದಾರಿದೀಪವಾದವರು. ಅನೇಕ ಮಹನೀಯರು ಅವರ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಯಶಸ್ಸು ಸಾಧಿಸಿದ್ದಾರೆ. ಹಿಂದುಳಿದ ವರ್ಗದ ಜನರು ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಕಾರ್ಯವನ್ನು ಪುತ್ತಿಗೆ ಸಹೋದರರು ಕೈಗೊಂಡಿದ್ದಾರೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಇಲ್ಲಿಗೆ ವಿನಿಯೋಗಿಸಲಾಗುವುದು ಎಂದರು.
ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ಪುತ್ತಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಉದ್ಯೋಗಗಳ ಬಗ್ಗೆ ಕರಾವಳಿಯ ಜನರಲ್ಲಿ, ಅದರಲ್ಲೂ ದಲಿತರಲ್ಲಿ ಹಿಂಜರಿಕೆ ಹೆಚ್ಚುತ್ತಿದೆ. ಸಾಕಷ್ಟು ವಿದ್ಯಾಭ್ಯಾಸವಿದ್ದರೂ ಸರಕಾರಿ ಕೆಲಸ ಅಥವಾ ಐಎಎಸ್, ಕೆಎಎಸ್, ಪೊಲೀಸ್ ಇಲಾಖೆಗಳಿಗೆ ಸೇರಲು ಈ ಸಮುದಾಯಗಳಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಅರಿವು ಹಾಗೂ ಮಾರ್ಗದರ್ಶನದ ಕೊರತೆಯೇ ಇದಕ್ಕೆ ಪ್ರಮುಖ ಕಾರಣ. ಈ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರಕ್ಕೆ ಸರಕಾರಿ ಉದ್ಯೋಗಗಳ ಮಾರ್ಗದರ್ಶನ ನೀಡುವಂತಹ ಪುಸ್ತಕಗಳನ್ನೇ ಹೆಚ್ಚಾಗಿ ಆಯ್ದುಕೊಳ್ಳಲಾಗಿದೆ. ಅದನ್ನು ಸ್ಥಳೀಯರು ಉಪಯೋಗಿಸಿಕೊಂಡು ಯಶಸ್ಸು ಸಾಧಿಸುವಂತಾಗಬೇಕು ಎಂದರು.
ದಲಿತ ಅಭಿವೃದ್ಧಿ ಸಮಿತಿ ಸಂಚಾಲಕ ದಾಸಪ್ಪ ಎಡಪದವು ಮಾತನಾಡಿ, ಅಂಬೇಡ್ಕರ್ ಬದುಕಿನ ಬಗ್ಗೆ ಇರುವ ಅಧ್ಯಯನಾತ್ಮಕ ಪುಸ್ತಕ ಭಂಡಾರ ಹಾಗೂ ಸಮಾಜಕ್ಕೆ ಅವುಗಳ ಅಗತ್ಯದ ಬಗ್ಗೆ ವಿವರಿಸಿದರು. ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿದರು.
ಉದ್ಯಮಿ ಅಬುಲ್ ಆಲಾ ಪುತ್ತಿಗೆ, ಫತೇ ಮುಹಮ್ಮದ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಉಮರ್ ಫಾರೂಕ್ ಪುತ್ತಿಗೆ, ಗ್ರಾಪಂ ಸದಸ್ಯರಾದ ಪ್ರಕಾಶ್ ಭಂಡಾರಿ, ಫ್ಲೋರಿನ್ ಡಿಸೋಜ, ಬೆಳುವಾಯಿ ಗ್ರಾಪಂ ಮಾಜಿ ಸದಸ್ಯ ಬಾಬು ಎಸ್. ಕಾನ, ಪ್ರಗತಿಪರ ಕೃಷಿಕ ಉದಯ ದೇವಾಡಿಗ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಶಶಿಕಾಂತ, ಬೆಳುವಾಯಿ ಗ್ರಾಪಂ ಮಾಜಿ ಸದಸ್ಯ ಅನೀಶ್ ಡಿಸೋಜ, ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಕಾರ್ಮಿಕ ಮುಖಂಡ ಶಂಕರ ವಾಲ್ಪಾಡಿ, ಚಂದ್ರಶೇಖರ್ ಕಾನ, ಕಟೀಲು ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಸೋಮಪ್ಪ ಅಲಂಗಾರು ಉಪಸ್ಥಿತರಿದ್ದರು.
ಜಗನ್ನಾಥ್ ಸ್ವಾಗತಿಸಿದರು. ಶಶಿರೇಖಾ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ವಂದಿಸಿದರು.
ನನ್ನ ತಂದೆ ದಿ. ಮೌಲಾನಾ ಇ.ಎಂ. ಶಾಫಿಯವರು ತಮ್ಮ ಊರು ಬೈಲೂರಿನಿಂದ ಉಡುಪಿಗೆ ವರ್ಗಾವಣೆಗೊಂಡ ಸಂದರ್ಭ ಮನೆಯ ಎಲ್ಲ ವಸ್ತುಗಳನ್ನು ಎತ್ತಿನಗಾಡಿಯಲ್ಲಿ ಸಾಗಿಸಬೇಕಾಗಿ ಬಂದಿತ್ತು. ತಂದೆಯವರ ಬಳಿ ಇದ್ದಿದ್ದ ಆಸ್ತಿಯೆಂದರೆ ನಾಲ್ಕೈದು ಕಪಾಟುಗಳಲ್ಲಿದ್ದ ಪುಸ್ತಕಗಳು. ಎತ್ತಿನಗಾಡಿಯಲ್ಲಿ ಅದನ್ನು ಸಾಗಿಸಲು ಅಸಾಧ್ಯವಾದುದರಿಂದ ಅವರು ದುಃಖದಿಂದ ಅತ್ತಿದ್ದರು. ಪುಸ್ತಕಗಳ ಜೊತೆಗೆ ಅವರಿಗೆ ಅವಿನಾಭಾವ ಸಂಬಂಧವಿತ್ತು.
-ಅಬ್ದುಸ್ಸಲಾಂ ಪುತ್ತಿಗೆ







