ಮಾನವ ಹಕ್ಕು ಸಂರಕ್ಷಣೆ ಒಪ್ಪಂದ ಪಾಲಿಸಲು ಭಾರತ ವಿಫಲ: ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಮೇ 7: 30 ವರ್ಷದ ಹಿಂದೆ ವಿಶ್ವಸಂಸ್ಥೆಯಲ್ಲಿ ಒಪ್ಪಂದ ಮಾಡಿಕೊಳ್ಳಲಾದ ಚಿತ್ರಹಿಂಸೆಯ ವಿರುದ್ದದ ಒಡಂಬಡಿಕೆಯನ್ನು (ಮಾನವ ಹಕ್ಕು ಸಂರಕ್ಷಣೆ ಒಪ್ಪಂದ) ಇದುವರೆಗೂ ಕಾನೂನು ಆಗಿ ಅನುಮೋದಿಸಲು ಭಾರತ ವಿಫಲವಾಗಿರುವುದನ್ನು ಸುಪ್ರಿಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಇದೊಂದು ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಕಾನೂನು ಪ್ರಕ್ರಿಯೆ ದೀರ್ಘಾವಧಿಯದ್ದು ಎಂದು ನಮಗೆ ತಿಳಿದಿದೆ. ಆದರೆ ಈ ಪ್ರಮುಖ ಒಪ್ಪಂದವನ್ನು ಕಾನೂನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನಾದರೂ ತೋರಿಸದಿರಲು ಕಾರಣವೇನು ಎಂದು ಸುಪ್ರೀಂಕೋರ್ಟ್‌ನ ಪೀಠವೊಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು. 30 ವರ್ಷಗಳ ಹಿಂದೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಇದನ್ನು ಅನುಮೋದಿಸುವಲ್ಲಿ ವಿಫಲವಾಗಿರುವ 9 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೂಲಕ ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದ್ದರು. ಈ ಪ್ರಕ್ರಿಯೆಗೆ ಕೆಲವೊಂದು ರಾಜ್ಯಗಳ ಅಭಿಪ್ರಾಯವನ್ನು ಇನ್ನಷ್ಟೇ ಪಡೆಯಬೇಕಿರುವ ಕಾರಣ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ತಿಳಿಸಿದರು. 2010ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಈ ಬಗ್ಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆಗ ಅಶ್ವನಿ ಕುಮಾರ್ ಅವರು ಸರಕಾರದ ಭಾಗವಾಗಿದ್ದರು. ಆದರೆ ಮಸೂದೆ ಅಂಗೀಕಾರವಾಗಲಿಲ್ಲ ಎಂದು ರಂಜಿತ್ ಕುಮಾರ್ ತಿಳಿಸಿದರು. ಇಲ್ಲಿ ಪಕ್ಷರಹಿತವಾಗಿ ಯೋಚಿಸಬೇಕಿದೆ. ಇದೊಂದು ಪ್ರಮುಖ ವಿಷಯ. ನಾವು ಒಪ್ಪಂದಕ್ಕೆ ಬದ್ಧರಾಗಿರುವುದು ಒಳ್ಳೆಯದೇ. ಆದರೆ ಇದು ಕಾನೂನು ಆಗಬೇಕಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು.
ವಿಶ್ವದಾದ್ಯಂತ ಮಾನವ ಹಕ್ಕುಗಳ ಸಂರಕ್ಷಣೆಯ ದೃಷ್ಟಿಯಿಂದ ರೂಪಿಸಲಾದ ಈ ಒಪ್ಪಂದಕ್ಕೆ 1997ರಲ್ಲಿ 161 ರಾಷ್ಟ್ರಗಳು ಸಹಿ ಹಾಕಿದ್ದವು. ಆದರೆ ಭಾರತ, ಪಾಕಿಸ್ತಾನ ಸೇರಿದಂತೆ ವಿಶ್ಬದ ಕೇವಲ 9 ರಾಷ್ಟ್ರಗಳು ಮಾತ್ರ ಇನ್ನೂ ಈ ಒಪ್ಪಂದವನ್ನು ಕಾನೂನಾಗಿ ಪರಿವರ್ತಿಸುವಲ್ಲಿ ವಿಫಲವಾಗಿವೆ. ತಮ್ಮ ಆಡಳಿತ ವ್ಯಾಪ್ತಿಯಲ್ಲಿರುವ ಯಾವುದೇ ಪ್ರದೇಶದಲ್ಲಿ ವ್ಯಕ್ತಿಗಳಿಗೆ ಚಿತ್ರಹಿಂಸೆ ನೀಡುವುದನ್ನು ಅಥವಾ ತಮ್ಮ ದೇಶದ ಪ್ರಜೆಗಳನ್ನು ಚಿತ್ರಹಿಂಸೆ ನೀಡಬಹುದಾದ ದೇಶಗಳಿಗೆ ಸಾಗಿಸುವುದನ್ನು ತಡೆಯಲು ಆಯಾ ದೇಶಗಳು ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.