ಭಡ್ತಿ ಮೀಸಲಾತಿ: ಪರಿಶಿಷ್ಟ ನೌಕರರಿಗೆ ಹಿಂಭಡ್ತಿ?

ಬೆಂಗಳೂರು, ಮೇ 7: ಪರಿಶಿಷ್ಟರಿಗೆ ಭಡ್ತಿ ಮೀಸಲಾತಿ ಕಲ್ಪಿಸಿದ್ದ ರಾಜ್ಯ ಸರಕಾರದ ಕಾಯ್ದೆಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಭಡ್ತಿ ಪಡೆದಿದ್ದ ಪರಿಶಿಷ್ಟ ನೌಕರರಿಗೆ ಹಿಂಭಡ್ತಿ ನಿಶ್ಚಿತವಾಗಿದೆ.
2002ರಲ್ಲಿ ರಾಜ್ಯ ಸರಕಾರ ಪರಿಶಿಷ್ಟರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಹೀಗಾಗಿ 1978ರ ಎ.27 ಹಾಗೂ ಅನಂತರ ಸರಕಾರಿ ಸೇವೆಗೆ ನಿಯೋಜನೆಗೊಂಡಿದ್ದ ಪರಿಶಿಷ್ಟರಿಗೆ ಕಲ್ಪಿಸಿದ್ದ ಭಡ್ತಿ ಆದೇಶ ಪುನಾರಚನೆಯಾಗಲಿದೆ. 2017ರ ಫೆ.9ರಂದು ರಾಜ್ಯ ಸರಕಾರದ ಭಡ್ತಿ ಸಂಬಂಧದ ಕಾಯ್ದೆಯನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್, 90 ದಿನಗಳಲ್ಲಿ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಕಾಯ್ದೆಯಡಿ ಭಡ್ತಿ ಮೀಸಲಾತಿ ಪಡೆದಿದ್ದ ಎಲ್ಲರಿಗೂ ಹಿಂಭಡ್ತಿ ನೀಡಲು ಗಡುವು ನೀಡಿತ್ತು.
ಆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಅಲ್ಲದೆ, ರಾಜ್ಯ ಸರಕಾರದ ಕಾಯ್ದೆ ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.





