ಮಂಗಳೂರಿನಲ್ಲಿ ಹೆಚ್ಚುತ್ತಿರುವ ಐಷಾರಾಮಿ ಕಾರುಗಳ ಖರೀದಿ

ಮಂಗಳೂರು, ಮೇ 7: ನಗರದಲ್ಲಿ ಇತ್ತೀಚಿನ ಎರಡು ವರ್ಷಗಳಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ನಗರವೇ ಐಷಾರಾಮಿ ಕಾರುಗಳನ್ನು ಖರೀದಿಸುವ ಸ್ಥಳವಾಗಿದೆ.
ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕೇವಲ ಬೆರಳೆಣಿಕೆಯಲ್ಲಿ ಐಷಾರಾಮಿ ಕಾರುಗಳ ಖರೀದಿ ನಡೆಯುತ್ತಿತ್ತು. ಆದರೆ ಇತ್ತೀಚಿನ ಎರಡು ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ಬಹುತೇಕ ಐಷಾರಾಮಿ ಕಾರು ಕಂಪೆನಿಗಳು ನಗರದಲ್ಲಿ ತಮ್ಮ ಪ್ರದರ್ಶನ ಮಳಿಗೆಗಳನ್ನು ಆರಂಭಿಸಿರುವುದು ಖರೀದಿಸುವವರ ಸಂಖ್ಯೆ ಹೆಚ್ಚಿರುವುದಕ್ಕೆ ಪುಷ್ಟಿ ನೀಡುತ್ತದೆ.
‘‘ಐಶಾರಾಮಿ ಕಾರುಗಳ ಮಾರಾಟ ಮಂಗಳೂರಿನಲ್ಲಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಐಷಾರಾಮಿ ಕಾರುಗಳು ಹೆಚ್ಚು ಮಾರಾಟವಾಗುತ್ತಿರುವ ನಗರಗಳಲ್ಲಿ ಮಂಗಳೂರು ಸದ್ಯದ ಪರಿಸ್ಥಿತಿಯಲ್ಲಿ ಎರಡನೆ ಸ್ಥಾನದಲ್ಲಿದೆ. 2014-15ನೆ ಸಾಲಿನಲ್ಲಿ ನಗರದಲ್ಲಿ 164 ಲಕ್ಸುರಿ ಕಾರುಗಳನ್ನು ಮಂಗಳೂರಿಗೆ ಖರೀದಿಸಿ ತರಲಾಗಿದೆ. 2015-16ನೆ ಸಾಲಿನಲ್ಲಿ ಈ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. 2016-17ರಲ್ಲಿ 305 ಮಂದಿ 20 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಕಾರುಗಳನ್ನು ಕೊಂಡುಕೊಂಡಿರುವುದು ಇಲ್ಲಿನ ಜನರಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ ’’ಎಂದು ಆರ್‌ಟಿಒ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಮಂಗಳೂರು ನಗರವನ್ನು ಹೆಚ್ಚು ಕೇಂದ್ರೀಕರಿಸಿ ಮಾರಾಟದ ಮಳಿಗೆಗಳನ್ನು ತೆರೆಯಲು ಆಸಕ್ತಿ ವಹಿಸುತ್ತಿರುವುದು, ನಗರದಲ್ಲಿ ಐಷಾರಾಮಿ ಕಾರುಗಳ ಸಂಖ್ಯೆಯಲ್ಲಿ ವೃದ್ಧಿಸಲು ಇನ್ನೊಂದು ಕಾರಣವಾಗಿದೆ ಎಂದು ಸ್ಥಳೀಯ ಗ್ರಾಹಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.







