‘ಯಾವ ಕುದುರೆಗಳಿಗೂ ಉದ್ದೀಪನಾ ಮದ್ದು ನೀಡಿಲ್ಲ’

ಬೆಂಗಳೂರು, ಮೇ 7: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಯಾವುದೇ ಕುದುರೆಗಳಿಗೂ ಉದ್ದೀಪನಾ ಮದ್ದು ನೀಡಿಲ್ಲ ಎಂದು ಕ್ಲಬ್‌ನ ಅಧ್ಯಕ್ಷ ವೈ. ಜಗನ್ನಾಥ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ರೋಸ್‌ಕೋರ್ಸ್‌ನಲ್ಲಿ ಕೆಲ ಕುದುರೆಗಳಿಗೆ ಉದ್ದೀಪನಾ ಮದ್ದು ನೀಡಲಾಗಿದೆ ಎಂದು ಆರೋಪಿಸಿ ಕುದುರೆ ಮಾಲಕ ಎ.21 ರಂದು ಟರ್ಫ್‌ಕ್ಲಬ್ ಸಿಇಒ ಸೇರಿದಂತೆ ಐವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಕ್ಲಬ್ ಯಾವುದೇ ಕುದುರೆಗಳಿಗೆ ಉದ್ದೀಪನಾ ಮದ್ದು ನೀಡಿಲ್ಲ. ಕೆಲವರು ಸುಳ್ಳು ಆರೋಪವನ್ನು ನಮ್ಮ ಮೇಲೆ ಹೇಳುತ್ತಿದ್ದಾರೆ ಎಂದರು.
ಕ್ವೀನ್ ಲತೀಫಾ ಕುದುರೆ ಸೇರಿದಂತೆ ಯಾವುದೇ ಕುದುರೆಗೂ ನಾವು ಉದ್ದೀಪನಾ ಮದ್ದು ನೀಡಿಲ್ಲ. ಬದಲಾಗಿ ಕುದುರೆ ಅನಾರೋಗ್ಯದಿಂದ ಬಳಲುತ್ತಿತ್ತು. ಆಗ ಅದಕ್ಕೆ ಚಿಕಿತ್ಸೆ ನೀಡುವಾಗ ಪ್ರೋಕೈನ್ ಅನ್ನೋ ಔಷಧಿ ನೀಡಿದ್ದೇವೆ. ಅದು ಉದ್ದೀಪನಾ ಮದ್ದಲ್ಲ. ಜ. 27ರಿಂದ ಫೆ.7ರವರೆಗೂ ಚಿಕಿತ್ಸೆ ನೀಡಲಾಗಿದೆ ಎಂದರು.
ಇದಾದ 25 ದಿನಗಳ ಬಳಿಕ, ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಶನ್ ಟ್ರೋಫಿನಲ್ಲಿ ಕುದುರೆ ಭಾಗವಹಿಸಿ, ಅದರಲ್ಲಿ ಮೊದಲ ಸ್ಥಾನ ಗಳಿಸಿತ್ತು. ಉದ್ದೀಪನಾ ಮದ್ದು ನೀಡಿದ ಆರೋಪದ ಹಿನ್ನಲೆಯಲ್ಲಿ ಕುದುರೆಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಮೂತ್ರದಲ್ಲಿ 10 ನ್ಯಾನೋ ಗ್ರಾಂನಷ್ಟು ಪ್ರೋಕೈನ್ ಇರೋದು ಪತ್ತೆಯಾಗಿತ್ತು. ಆದರೆ ಇದ್ದು ಉದ್ದೀಪನಾ ಮದ್ದಲ್ಲ. ಆದರೆ ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.







