‘ಜನ್‌ಧನ್’ ಬ್ಯಾಂಕ್ ಖಾತೆಗಳು ವಹಿವಾಟಿಲ್ಲದೆ ನಿಷ್ಪ್ರಯೋಜಕ: ಯು.ಪಿ.ಪುರಾಣಿಕ್ ವಿಷಾದ
ಬೆಂಗಳೂರು, ಮೇ 6: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ಯೋಜನೆಯಾದ ಜನ್‌ಧನ್ ಬ್ಯಾಂಕ್ ಖಾತೆಗಳಿಂದ ಯಾವುದೇ ಹಣದ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ಜನಧನ್ ಖಾತೆಗಳು ನಿಷ್ಪ್ರಯೋಜಕವಾಗಿವೆ ಎಂದು ಹಿರಿಯ ಲೇಖಕ ಯು.ಪಿ.ಪುರಾಣಿಕ್ ವಿಷಾದ ವ್ಯಕ್ತಪಡಿಸಿದ್ದಾರೆ.
ರವಿವಾರ ಶ್ರೀನಿಧಿ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ತಮ್ಮ ‘ಹಣಕಾಸು ಹಿತೈಷಿ’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇವಲ ಬ್ಯಾಂಕ್ ಖಾತೆ ತೆರೆದ ಮಾತ್ರಕ್ಕೆ ಬ್ಯಾಂಕ್ ಸಾಕ್ಷರತೆ ಸಾಧಿಸಿದಂತೆ ಆಗುವುದಿಲ್ಲ. ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವಂತಹ ಜ್ಞಾನವನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತೆ ಸಿ.ಜೆ.ಮಂಜುಳಾ ಮಾತನಾಡಿ, ಹಣಕಾಸು ದೇಶದ ಪ್ರತಿಯೊಬ್ಬ ಪ್ರಜೆಯೂ ಹಣಕಾಸು ವ್ಯವಹಾರದಲ್ಲಿ ನಿಪುಣರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಮೀಕ್ಷೆಯ ಪ್ರಕಾರ ಶೇ.81ರಷ್ಟು ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣದ ವೆಚ್ಚದ ಕುರಿತು ಅರಿವಿರುವುದಿಲ್ಲ. ಇದರಿಂದ ತಮ್ಮಲ್ಲಿರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿಯದೆ ಸಾಲಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ವಿಷಾಧಿಸಿದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎ.ಸ್ಟೀವನ್ ವಾಜ್, ಲೇಖಕ ಬಿ.ವಿ.ಕೆದಿಲಾಯ, ಕರ್ನಾಟಕ ಬ್ಯಾಂಕ್ ಉಪ ವ್ಯವಸ್ಥಾಪಕ ನಿರ್ದೇಶಕ ಗೋಕುಲ್ ದಾಸ್ ಪೈ ಮತ್ತಿತರರಿದ್ದರು.







