ಜನರ ಕಿವಿಗೆ ಹೂವಿಟ್ಟ ಟಿವಿ ಚಾನಲ್ ಗಳು ಹಾಗೂ ಬಿಜೆಪಿ ವಕ್ತಾರ
ಯೋಧರ ಶಿರಚ್ಛೇಧಕ್ಕೆ ಭಾರತದಿಂದ ತಿರುಗೇಟಿನ ಆಧಾರರಹಿತ ವರದಿ

ಯೋಧರ ಶಿರಚ್ಛೇದಕ್ಕೆ ಭಾರತದಿಂದ ತಿರುಗೇಟಿನ ಆಧಾರರಹಿತ ವರದಿ ಜನರ ಕಿವಿಗೆ ಹೂವಿಟ್ಟ ಟಿವಿ ಚಾನೆಲ್‌ಗಳು ಹಾಗೂ ಬಿಜೆಪಿ ವಕ್ತಾರ
ಹೊಸದಿಲ್ಲಿ,ಮೇ 7: ಮೇ 1ರಂದು ಪಾಕಿಸ್ತಾನಿ ಗಡಿ ಕಾರ್ಯಪಡೆಯು ಜಮ್ಮು-ಕಾಶ್ಮೀರದ ಪೂಂಛ್ ವಿಭಾಗದ ಕೃಷ್ಣಾ ಘಾಟಿಯಲ್ಲಿ ಭಾರತೀಯ ಯೋಧರಾದ 22 ಸಿಖ್ ರೆಜಿಮೆಂಟ್‌ನ ನಾಯಿಬ್ ಸುಬೇದಾರ ಪರಮಜೀತ್ ಸಿಂಗ್ ಮತ್ತು ಬಿಎಸ್‌ಎಫ್ ಹೆಡ್ ಕಾನ್‌ಸ್ಟೇಬಲ್ ಪ್ರೇಮ್ ಸಾಗರ್ ಅವರ ಶಿರಚ್ಛೇದ ಮಾಡುವ ಮೂಲಕ ತನ್ನ ಬರ್ಬರತೆಯನ್ನು ಪ್ರದರ್ಶಿಸಿತ್ತು.
ಇದರ ಬೆನ್ನಲ್ಲೇ ಹಲವಾರು ಟಿವಿ ವಾಹಿನಿಗಳು ಭಾರತೀಯ ಸೇನೆಯು ಪ್ರತೀಕಾರದ ದಾಳಿಯನ್ನು ನಡೆಸಿದ್ದು, ಪಾಕಿಸ್ತಾನದ ಎರಡು ಸೇನಾನೆಲೆಗಳನ್ನು ಧ್ವಂಸಗೊಳಿಸಿದೆ ಮತ್ತು 7-10 ಪಾಕ್ ಸೈನಿಕರನ್ನು ಕೊಂದುಹಾಕಿದೆ ಎಂದು ವರದಿ ಮಾಡಲು ಆರಂಭಿಸಿದ್ದವು. ಕಿರ್ಪಾನ್ ಮತ್ತು ಪಿಂಪಲ್ ಧ್ವಂಸಗೊಂಡ ಪಾಕ್ ಸೇನಾ ನೆಲೆಗಳಾಗಿವೆ ಎಂದು ಆಜ್ ತಕ್ ವರದಿ ಮಾಡಿತ್ತು.
ಅಸಲಿಗೆ ಪ್ರತೀಕಾರ ದಾಳಿಯನ್ನು ಮೊದಲು ವರದಿ ಮಾಡಿದ್ದೇ ಆಜ್‌ತಕ್. ಮೇ 1ರಂದು ರಾತ್ರಿ ಎರಡು ಬಾರಿ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ವರದಿಯನ್ನು ಹಂಚಿಕೊಂಡಿದ್ದ ಅದು ಏಳು ಪಾಕ್ ಸೈನಿಕರನ್ನು ಕೊಲ್ಲಲಾಗಿದೆ ಎಂದು ಹೇಳಿತ್ತು.
ಇಕನಾಮಿಕ್ ಟೈಮ್ಸ್‌ನ ಪತ್ರಕರ್ತ ಮನು ಪಬ್ಬಿ ಅವರು ಆಜ್ ತಕ್ ವರದಿ ಮಾಡಿರುವ ಎರಡು ಸೇನಾನೆಲೆಗಳಲ್ಲಿ ವಾಸ್ತವದಲ್ಲಿ ಒಂದು ನೆಲೆ ಭಾರತಕ್ಕೆ ಸೇರಿದ್ದೇ ಹೊರತು ಪಾಕಿಸ್ತಾನದ್ದಲ್ಲ ಎಂದು ಹೇಳಿದ್ದರು.
ಇಂಡಿಯಾ ಟುಡೇ ಆರಂಭದಲ್ಲಿ ಭಾರತೀಯ ಸೇನೆಯು ಧ್ವಂಸ ಮಾಡಿದೆಯೆನ್ನಲಾದ ಎರಡು ಸೇನಾನೆಲೆಗಳ ಹೆಸರುಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತಾದರೂ ಬಳಿಕ ಸದ್ದಿಲ್ಲದೆ ಕತ್ತರಿಯಾಡಿಸಿ ಆ ಹೆಸರುಗಳನ್ನು ತನ್ನ ವರದಿಯಿಂದ ತೆಗೆದು ಹಾಕಿತ್ತು.
ಪ್ರತೀಕಾರದ ದಾಳಿ ನಡೆದಿರಲೇ ಇಲ್ಲ, ಟಿವಿ ವಾಹಿನಿಗಳು ಆಧಾರರಹಿತ ಸುದ್ದಿಗಳನ್ನು ಬಿತ್ತರಿಸಿವೆ ಎಂದು ಮೇ 2ರಂದು ಹಿಂದುಸ್ತಾನ್ ಟೈಮ್ಸ್‌ನ ವರದಿ ಸ್ಪಷ್ಟಡಿಸಿತ್ತು. ಸೇನೆಯ ಉತ್ತರ ಕಮಾಂಡ್‌ನ ಹಿರಿಯ ಅಧಿಕಾರಿಯೋರ್ವರು ತನಗೆ ಹೇಳಿಕೆಯೊಂದನ್ನು ನೀಡಿದ ಬಳಿಕ ಹಿಂದುಸ್ತಾನ ಟೈಮ್ಸ್ ಈ ವರದಿಯನ್ನು ಪ್ರಕಟಿಸಿತ್ತು.
ಆದರೆ ಹೀಗೆ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದು ಟಿವಿ ಚಾನೆಲ್‌ಗಳು ಮಾತ್ರವಲ್ಲ.....ಆಡಳಿತ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಕೂಡ ಈ ಪ್ರತೀಕಾರದ ದಾಳಿಯನ್ನು ಉಲ್ಲೇಖಿಸಲು ಆರಂಭಿಸಿದ್ದರು. ಪರಮಜೀತ್ ಸಿಂಗ್ ಅವರ ಪತ್ನಿ ಪರಮಜೀತ್ ಕೌರ್ ಅವರೂ ಉಪಸ್ಥಿತರಿದ್ದ ಆಜ್‌ತಕ್‌ನ ಗುಂಪುಚರ್ಚೆಯಲ್ಲಿ ಅವರು ಭಾರತೀಯ ಸೇನೆಯು ಎರಡು ಪಾಕಿಸ್ತಾನಿ ನೆಲೆಗಳನ್ನು ಧ್ವಂಸಗೊಳಿಸಿದೆ ಮತ್ತು ಏಳು ಪಾಕ್ ಸೈನಿಕರನ್ನು ಕೊಂದಿದೆ ಎಂದು ಹೇಳಿದ್ದರು.
ಸೇನೆಯು ಪ್ರತೀಕಾರ ದಾಳಿಯನ್ನು ನಡೆಸಿಯೇ ಇರಲಿಲ್ಲ ಎಂಬ ಹಿಂದುಸ್ತಾನ್ ಟೈಮ್ಸ್ ಸುದ್ದಿ ನಿಜವಾಗಿದ್ದರೆ ಟಿವಿಯ ನೇರ ಪ್ರಸಾರದಲ್ಲಿ ಪಾತ್ರಾ ಅವರು ಹುತಾತ್ಮ ಯೋಧನ ಪತ್ನಿಗೆ ಸುಳ್ಳು ಹೇಳುತ್ತಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಆಜ್‌ತಕ್‌ನ ನಿರೂಪಕ ಓಂ ಕಶ್ಯಪ್ ಜೊತೆ ಇನ್ನೊಂದು ಕಾರ್ಯಕ್ರಮದಲ್ಲಿಯೂ ಪಾತ್ರಾ ಇದೇ ಹೇಳಿಕೆಯನ್ನು ಪುನರಾವರ್ತಿಸಿದ್ದರು.
ಆಜ್‌ತಕ್ ಮಾತ್ರವಲ್ಲ, ಅದರ ಸೋದರ ಸಂಸ್ಥೆ ಇಂಡಿಯಾ ಟುಡೇ, ಝೀ ನ್ಯೂಸ್, ಎಬಿಪಿ ನ್ಯೂಸ್ ಮತ್ತು ಇಂಡಿಯಾ ಟಿವಿ ಕೂಡ ಭಾರತೀಯ ಸೇನೆಯಿಂದ ಪ್ರತೀಕಾರ ಕುರಿತಂತೆ ವ್ಯಾಪಕ ವರದಿಗಳನ್ನು ಪ್ರಸಾರ ಮಾಡಿದ್ದವು.
ಮುದ್ರಣ ಮಾಧ್ಯಮಗಳ ಕುರಿತು ಹೇಳುವುದಾದರೆ ಅಕ್ರಮವಾಗಿ ಉತ್ತರ ಪ್ರದೇಶ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿದ್ದ ದೈನಿಕ್ ಜಾಗರಣ್ ಭಾರತೀಯ ಸೇನೆಯಿಂದ ಪ್ರತೀಕಾರದ ಕಥೆಯನ್ನು ತನ್ನ ಮುಖಪುಟದಲ್ಲಿ ವರದಿ ಮಾಡಿತ್ತು.
ಕುತೂಹಲಕರ ವಿಷಯವೆಂದರೆ ಆಜ್ ತಕ್ ಮತ್ತು ಇಂಡಿಯಾ ಟುಡೇ ತಮ್ಮ ನಂತರದ ವರದಿಗಳಲ್ಲಿ ಭಾರತೀಯ ಸೇನೆಯಿಂದ ಪ್ರತಿಕಾರ ನಡೆದಿದೆ ಎನ್ನುವುದನ್ನು ಒಂದು ಬಾರಿಯೂ ಉಲ್ಲೇಖಿಸಿರಲಿಲ್ಲ. ಪ್ರತೀಕಾರ ಕೈಗೊಳ್ಳಲು ಸೇನೆಯು ಪಣ ತೊಟ್ಟಿದೆ ಎಂದು ಅವು ಹೇಳಿವೆಯೇ ಹೊರತು ಸೇನೆ ಈಗಾಗಲೇ ಪ್ರತೀಕಾರದ ದಾಳಿ ನಡೆಸಿದೆ ಎಂಬ ತಮ್ಮದೇ ಹೇಳಿಕೆಯನ್ನು ಮರೆತೇ ಬಿಡುವ ಮೂಲಕ ಜಾಣತನ ಪ್ರದರ್ಶಿಸಿವೆ.
ಇಷ್ಟಾದ ಮೇಲೆ ಕೊನೆಯ ಪ್ರಶ್ನೆ. ಸೇನೆಯು ನಿಜಕ್ಕೂ ಪ್ರತೀಕಾರವನ್ನು ತೆಗೆದುಕೊಂಡಿತ್ತೇ ಅಥವಾ ಐದು ರಾಷ್ಟ್ರೀಯ ವಾಹಿನಿಗಳು ಮತ್ತು ಒಂದು ಹಿಂದಿ ದೈನಿಕ ಜನರ ಕಿವಿಗಳ ಮೇಲೆ ಹೂವುಗಳನ್ನು ಇಟ್ಟಿದ್ದವೇ?









