ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ: ಸುಪ್ರಿಂ ತೀರ್ಪು
ಮೇವು ಹಗರಣದಲ್ಲಿ ಮಾಜಿ ಸಿಎಂಗೆ ಹಿನ್ನಡೆ

ಹೊಸದಿಲ್ಲಿ, ಮೇ 8: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯ ಮಂತ್ರಿ ಲಾಲು ಪ್ರಸಾದ್ ಯಾದವ್ ವಿರುದ್ಧದ ಕ್ರಿಮಿನಲ್ ಸಂಚು ಆರೋಪವನ್ನುಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಮೇವು ಹಗರಣದಲ್ಲಿ ಲಾಲು ಅವರಿಗೆ ಇದರೊಂದಿಗೆ ತೀವ್ರ ಹಿನ್ನಡೆಯಾಗಿದೆ. ಅವರು ಈ ಹಗರಣದಲ್ಲಿ ಐದು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ.
ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರೊಂದಿಗೆ ಸಿಬಿಐ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಲಾಲು ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಸಿಬಿಐ ತನ್ನ ವಿಚಾರಣೆಯನ್ನು ಮುಂದುವರಿಸಲಿದೆ ಎಂದು ಹೇಳಿದೆ.
ಕ್ರಿಮಿನಲ್ ಸಂಚು ಆರೋಪವನ್ನು ಜಾರ್ಖಂಡ್ ಹೈಕೋರ್ಟ್ ಕೈ ಬಿಟ್ಟಿತ್ತು. ಒಂದೇ ಅಪರಾಧಕ್ಕೆ ಸಂಬಂಧಿಸಿ ಬೇರೆ ಬೇರೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಜಾರ್ಖಂಡ್ ಹೈಕೋರ್ಟ್ ಲಾಲು ವಿರುದ್ಧದ ಇರುವ ಕ್ರಿಮಿನಲ್ ಸಂಚು ಅರೋಪವನ್ನು ಕೈ ಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ " ಲಾಲು ವಿರುದ್ಧದ ಕ್ರಿಮಿನಲ್ ಸಂಚು ಆರೋಪವನ್ನು ಕೈ ಬಿಡಲು ಸಾಧ್ಯವಿಲ್ಲ . ಬೇರೆ ಬೇರೆ ಆರೋಪಗಳಿಗೆ ಪ್ರತ್ಯೇಕ ವಿಚರಣೆ ನಡೆಸಬೇಕು" ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ