ವಿಟ್ಲ: ಲಕ್ಷಾಂತರ ಮೌಲ್ಯದ ಅಡಿಕೆ, ಗೋಡಂಬಿ ಕಳವು ಪ್ರಕರಣ ಬಯಲಿಗೆ; ಇಬ್ಬರ ಸೆರೆ

ಬಂಟ್ವಾಳ, ಮೇ 8: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಡಿಕೆ, ಗೇರು ಬೀಜ ಕಳವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ವೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೇಪು, ಕೋಡಪದವು, ನೇರಳಕಟ್ಟೆ, ಸೂರ್ಯ ಕಡೆಗಳಲ್ಲಿ ಸುಮಾರು ಎರಡು ತಿಂಗಳಿನಿಂದ ನಡೆಯುತ್ತಿದ್ದ ಅಡಿಕೆ, ಗೇರುಬೀಜ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೊತ್ತು ವಶಕ್ಕೆ ಪಡೆಯಲಾಗಿದೆ ಎಂದರು.
ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅನ್ವರ್ ಅಲಿ(36), ಅದೇ ಗ್ರಾಮದ ಸಾಲ್ಮರ ನಿವಾಸಿ ಮುಹಮ್ಮದ್ ಇರ್ಫಾನ್(19) ಬಂಧಿತ ಆರೋಪಿಗಳಾಗಿದ್ದಾರೆ. ಇವರು ವಿವಿಧೆಡೆಗಳಿಂದ ಕಳವುಗೈದಿರುವ 6 ಕ್ವಿಂಟಲ್ ಅಡಿಕೆ, 3 ಕ್ವಿಂಟಾಲ್ ಗೇರುಬೀಜ ಹಾಗೂ ಕಳ್ಳತನ ಕೃತ್ಯಕ್ಕೆ ಬಳಸಿರುವ ಒಂದು ಮಾರುತಿ ರಿಟ್ಝ್, ಒಂದು ಮಾರುತಿ ಓಮ್ನಿ ಕಾರು, 2 ಆಟೋ ರಿಕ್ಷಾ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು ವೌಲ್ಯ 12.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್ಪಿಡಾ.ರವೀಶ್ ಸಿ.ಆರ್. ನೇತೃತ್ವದಲ್ಲಿ ವಿಟ್ಲ ಠಾಣೆ ಎಸ್ಸೈ ನಾಗರಾಜ್ ಸಹಿತ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದರು.







