ರಜನಿಕಾಂತ್‌ರನ್ನು ಭೇಟಿಯಾದ ಕಾಂಗ್ರೆಸ್ ನಾಯಕಿ ನಗ್ಮಾ

ಚೆನ್ನೈ, ಮೇ 8: ಪ್ರಮುಖ ಚಲನಚಿತ್ರ ನಟಿ ಮತ್ತು ಮಹಿಳಾ ಕಾಂಗ್ರೆಸ್ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ನಗ್ಮಾ ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ಸಂದರ್ಶಿಸಿದ್ದಾರೆ. ಕಾಂಗ್ರೆಸ್‌ಗೆ ಆಹ್ವಾನಿಸಲು ರಜನಿಕಾಂತ್‌ರನ್ನು ಅವರು ಭೇಟಿಯಾದರು ಎಂದು ವದಂತಿ ಹಬ್ಬಿದೆ. ಇದೊಂದು ಸೌಹಾರ್ದ ಭೇಟಿ ಎಂದು ಸ್ಪಷ್ಟಪಡಿಸುವ ಮೂಲಕ ನಗ್ಮಾ ವದಂತಿಯನ್ನು ನಿರಾಕರಿಸಿದ್ದಾರೆ. ತನ್ನ ಪ್ರೀತಿಯ ನಟ ಮತ್ತು ಗೆಳೆಯ ಅದ ‘ಭಾಷಾ’ರೊಂದಿಗೆ ವಿವಿಧ ವಿಷಯಗಳನ್ನು ಚರ್ಚಿಸಿದ್ದೇನೆ ಎಂದು ಟ್ವಿಟರ್ ಮೂಲಕ ನಗ್ಮಾ ಹೇಳಿದ್ದಾರೆ. ಅವರು ರಜನಿಕಾಂತ್‌ರೊಂದಿಗೆ ಇದ್ದ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ಆದರೆ ರಜಿನಿಯೊಂದಿಗೆ ಯಾವ ವಿಷಯ ಮಾತಾಡಿದೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ರಜನಿ ರಾಜಕೀಯ ಪ್ರವೇಶಿಸಿದರೆ ಉತ್ತಮ, ಅವರು ವಿಜಯಿಯಾಗುತ್ತಾರೆ ಎಂದುನಗ್ಮಾ ಭವಿಷ್ಯ ನುಡಿದಿದ್ದಾರೆ. 1990ರಲ್ಲಿ ರಜನಿ, ನಗ್ಮಾ ಒಟ್ಟಿಗೆ ನಟಿಸಿದ್ದ ಸಿನೆಮಾ ಬಾಕ್ಸ್ ಆಫೀಸ್ ಹಿಟ್ ಆಗಿದ್ದವು.
ಇವರಿಬ್ಬರು ಜೊತೆಗೂಡಿ ನಟಿಸಿ 1995ರಲ್ಲಿ ಬಿಡುಗಡೆಗೊಂಡ ‘ಭಾಷಾ’ ಸಿನೆಮಾ ಸೂಪರ್ ಹಿಟ್ ಆಗಿತ್ತು. ಇದೇವೇಳೆ ರಜನಿಕಾಂತ್‌ರನ್ನು ಪಕ್ಷಕ್ಕೆ ಸೇರಿಸಲು ಎಲ್ಲ ರಾಜಕೀಯ ಪಕ್ಷಗಳು ಮೇಲಾಟ ನಡೆಸುತ್ತಿವೆ. ಕಳೆದ ಲೋಕಸಭೆ ಚುನಾವಣೆಗೆ ಮೊದಲು ನರೇಂದ್ರ ಮೋದಿ ರಜನಿಕಾಂತ್‌ರನ್ನು ಭೇಟಿಯಾಗಿ ಬೆಂಬಲ ಕೇಳಿದ್ದರು. ನಂತರ ರಜನಿಕಾಂತ್ ಬಿಜೆಪಿಗೆ ನಿಕಟವಾಗುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.





