ಝೀಬ್ರಾ ಕ್ರಾಸಿಂಗ್‌ನ ಅನುಪಸ್ಥಿತಿಯಿಂದಾಗಿ ಅಪಘಾತ ಪ್ರಕರಣದಿಂದ ಪಾರಾದ ಚಾಲಕ

ಮುಂಬೈ,ಮೇ 8: ವ್ಯಕ್ತಿಯೋರ್ವ ಪಾದಚಾರಿಗಳು ರಸ್ತೆ ದಾಟಲು ಅವಕಾಶ ಕಲ್ಪಿಸುವ ಝೀಬ್ರಾ ಕ್ರಾಸಿಂಗ್ ಅಥವಾ ಸಿಗ್ನಲ್ ಇಲ್ಲದ ಕಡೆ ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದರೆ ನಿರ್ಲಕ್ಷದ ಚಾಲನೆಗಾಗಿ ವಾಹನದ ಚಾಲಕನನ್ನು ದೂರಲಾಗದು. ಇಲ್ಲಿಯ ನ್ಯಾಯಾಲಯವೊಂದು ಇತ್ತೀಚಿಗೆ ಇಂತಹುದೊಂದು ತೀರ್ಪನ್ನು ನೀಡಿದೆ.
ಇಲ್ಲಿಯ ಹಾಜಿ ಅಲಿಯಲ್ಲಿ ಎನ್‌ಎಸ್‌ಸಿಐನ ಹೊರಗೆ ರಸ್ತೆ ದಾಟುತ್ತಿದ್ದ ಬಾಲಕ ನೋರ್ವನಿಗೆ ಕಾರು ಢಿಕ್ಕಿ ಹೊಡೆಸಿ ಆತನ ಸಾವಿಗೆ ಕಾರಣನಾಗಿ ಅತಿವೇಗ ಹಾಗೂ ಅಜಾಗ್ರತೆಯ ಚಾಲನೆಯ ಆರೋಪವನ್ನು ಎದುರಿಸುತ್ತಿದ್ದ ಚಾಲಕ ವಿಶಾಲ್ ವಾಲ್ಮೀಕಿ (26) ಎಂಬಾತನನ್ನು ಅಪಘಾತ ನಡೆದ ಸ್ಥಳದಲ್ಲಿ ಝೀಬ್ರಾ ಕ್ರಾಸಿಂಗ್ ಅಥವಾ ಸಿಗ್ನಲ್ ಇರಲಿಲ್ಲವೆಂಬ ಕಾರಣದಿಂದ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಬಾಲಕ ಝೀಬ್ರಾ ಕ್ರಾಸಿಂಗ್ ಇಲ್ಲದ ಸ್ಥಳದಲ್ಲಿ ರಸ್ತೆ ದಾಟುತ್ತಿದ್ದ. ಅಪಘಾತ ಸ್ಥಳದಲ್ಲಿ ಸಿಗ್ನಲ್ ಕಂಬವೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿಯಿಂದ ತಪ್ಪು ಅಥವಾ ನಿರ್ಲಕ್ಷ ನಡೆದಿದೆ ಎಂದು ಹೇಳುವಂತಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿದೆ.
2012,ಅ.23ರಂದು ಸಂಜೆ ಈ ಘಟನೆ ನಡೆದಿತ್ತು. ಮೃತ ಬಾಲಕ ತನ್ನ ಸೋದರ ಮತ್ತು ಸೋದರಿಯ ಜೊತೆಗೆ ದಿನಸಿ ಸಾಮಾನು ತರಲು ಅಂಗಡಿಗೆ ಹೋಗುತ್ತಿದ್ದ. ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡು ಪ್ರಜ್ಞಾಶೂನ್ಯನಾಗಿದ್ದ ಬಾಲಕ ಅದೇ ದಿನ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.







