ಮೇ 20: ರಿಯಾಝ್ ವೌಲವಿ ಹತ್ಯೆ ಪ್ರಕರಣದ ಸಂಚುಕೋರರ ಬಂಧನಕ್ಕೆ ಆಗ್ರಹಿಸಿ ಎಸ್‌ಡಿಪಿಐ ಧರಣಿ

ಕಾಸರಗೋಡು, ಮೇ 8: ಮದ್ರಸ ಶಿಕ್ಷಕ ರಿಯಾಝ್ ಮೌಲವಿ ಕೊಲೆ ಪ್ರಕರಣದ ಸಂಚುಕೋರರನ್ನು ಹಾಗೂ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಎಸ್.ಡಿ.ಪಿ.ಐ ಮೇ 20ರಂದು ಕೋಝಿಕ್ಕೋಡ್‌ನಲ್ಲಿರುವ ಉತ್ತರ ವಲಯ ಎಡಿಜಿಪಿ ಕಚೇರಿಗೆ ಜಾಥಾ ನಡೆಸಲು ತೀರ್ಮಾನಿಸಿರುವುದಾಗಿ ರಾಜ್ಯ ಕಾರ್ಯದರ್ಶಿ ಎ.ಕೆ.ಅಬ್ದುಲ್ ಮಜೀದ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆಯ ಹಿಂದೆ ಕೇರಳ ಅಲ್ಲದೆ ಹೊರರಾಜ್ಯದ ಸಂಘಪರಿವಾರದ ಕೈವಾಡ ಇದ್ದು, ಅವರನ್ನು ಕಾನೂನಿನ ಮುಂದೆ ತರಬೇಕು. ಆರಂಭದಿಂದಲೇ ತನಿಖೆಯ ಹಾದಿ ತಪ್ಪಿಸಲಾಗಿದೆ. ಪೊಲೀಸರೇ ಕಥೆ ಸೃಷ್ಟಿಸಿ ನೈಜ ಆರೋಪಿಗಳನ್ನು ಪಾರಾಗುವಂತೆ ಮಾಡಿದ್ದಾರೆ. ಕೇವಲ ಮೂವರು ಯುವಕರನ್ನು ಮಾತ್ರ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂಬುದು ಪೊಲೀಸರವಾದ. ಆದರೆ ಕೃತ್ಯಕ್ಕೆ ಸಂಚು ನಡೆಸಿದವರನ್ನು ಇನ್ನೂ ಬಯಲಿಗೆಯಲು ಪೊಲೀಸರು ಮುಂದಾಗದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಅವರು ದೂರಿದರು.
ಆಡಳಿತ, ಪ್ರತಿಪಕ್ಷದ ಕೆಲ ನಾಯಕರು ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಹುನ್ನಾರ ನಡೆಸುತ್ತಿದ್ದಾರೆ. ಸೂಕ್ತ ತನಿಖೆ ನಡೆಸಿ ಕೂಡಲೇ ಸಂಚು ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಮಜೀದ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಪಿ.ಆರ್.ಕೃಷ್ಣನ್ ಕುಟ್ಟಿ, ಜಿಲ್ಲಾಧ್ಯಕ್ಷ ಎನ್‌ಯು.ಅಬ್ದುಲ್ ಸಲಾಂ, ಕಾರ್ಯದರ್ಶಿ ಖಾದರ್ ಅರಫಾ ಮೊದಲಾದವರು ಉಪಸ್ಥಿತರಿದ್ದರು.







