ಗಂಡುಮಗುವನ್ನು ಪಡೆಯುವುದು ಹೇಗೆ ?
ಮಹಾರಾಷ್ಟ್ರದ ಆಯುರ್ವೇದ ಪಠ್ಯಪುಸ್ತಕದಲ್ಲೊಂದು ಆಘಾತಕಾರಿ ಪಾಠ

ಮುಂಬೈ,ಮೇ 7: ಗಂಡುಮಗುವಾಗಬೇಕೇ..? ಹಾಗಾದರೆ ಆಲದ ಮರದ, ಉತ್ತರಕ್ಕೆ ಮುಖ ಮಾಡಿರುವ (ಪೂರ್ವಕ್ಕೆ ಮುಖ ಮಾಡಿದ್ದರೂ ಆಗುತ್ತದೆ) ಎರಡು ಟೊಂಗೆಗಳನ್ನು ತೆಗೆದುಕೊಳ್ಳಿ. ಇದಕ್ಕೆ ಎರಡೇ ಎರಡು ಕಾಳು ಉದ್ದಿನ ಬೇಳೆ ಮತ್ತು ಸಾಸಿವೆ ಸೇರಿಸಿ ಮೊಸರಿನೊಂದಿಗೆ ಅರೆದು ಕುಡಿಯಿರಿ. ಗಂಡುಮಗುವಾಗದಿದ್ದರೆ ಹೇಳಿ!
ಇದು ಯಾರೋ ಸ್ವಘೋಷಿತ ದೇವಮಾನವ ಗಂಡುಮಗುವಿಗಾಗಿ ಹಂಬಲಿಸುವ ಅಮಾಯಕ ದಂಪತಿಗೆ ತಿಳಿಸಿರುವ ಔಷಧಿಯಲ್ಲ...ಇದು ಮಹಾರಾಷ್ಟ್ರ ವೈದ್ಯಕೀಯ ವಿಜ್ಞಾನಗಳ ವಿವಿಯ ಬಿಎಎಂಎಸ್ ಆಯುರ್ವೇದ ವೈದ್ಯಶಿಕ್ಷಣ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಉಲ್ಲೇಖಿತ ಅಂಶವಾಗಿದೆ. ಈ ಪುಸ್ತಕ ಗಂಡುಮಗುವನ್ನು ಪಡೆಯುವ ಉಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ.
ಇದನ್ನು ಚರಕ ಸಂಹಿತೆಯಿಂದ ಎತ್ತಿಕೊಂಡು ಪಠ್ಯದಲ್ಲಿ ಸೇರಿಸಲಾಗಿದೆ. ಈ ಪುಸ್ತಕವು ಹೇಳಿರುವಂತೆ ಗಂಡು ಭ್ರೂಣವನ್ನು ಸೃಷ್ಟಿಸುವ ಪ್ರಕ್ರಿಯೆಯನ್ನು ‘ಪುಸನ್ವಾನ್’ ಎಂದು ಕರೆಯಲಾಗುತ್ತದೆ ಮತ್ತು ಗಂಡುಮಗುವನ್ನು ಹೆರಲು ಬಯಸುವ ಯಾವುದೇ ಮಹಿಳೆಯು ತಾನು ಗರ್ಭ ಧರಿಸಿದ ತಕ್ಷಣ ಪುಸನ್ವಾನ್ ವಿಧಿಗೊಳಪಡಬೇಕಾಗುತ್ತದೆ.
ಗಂಡುಮಗುವಾಗುವಂತೆ ನೋಡಿಕೊಳ್ಳಲು ಹಲವಾರು ವಿವಿಧ ವಿಧಾನಗಳನ್ನು ಈ ಪುಸ್ತಕವು ಪಟ್ಟಿ ಮಾಡಿದೆ. ದುಬಾರಿಯಾಗಿರುವ ಇಂತಹ ವಿಧಾನವೊಂದು ಇಲ್ಲಿದೆ. ಚಿನ್ನ,ಬೆಳ್ಳಿ ಅಥವಾ ಕಬ್ಬಿಣದಿಂದ ಪುರುಷನ ಎರಡು ಪುಟಾಣಿ ವಿಗ್ರಹಗಳನ್ನು ಮಾಡಿ ಅವುಗಳನ್ನು ಮೂಸೆಯಲ್ಲಿ ಹಾಕಿ ಬೆಂಕಿಯಲ್ಲಿ ಕರಗಿಸಿ. ಕರಗಿದ ಲೋಹವನ್ನು ಹಾಲು, ಮೊಸರು ಅಥವಾ ನೀರಿನಲ್ಲಿ ಸುರಿದು ಪುಷ್ಪ ನಕ್ಷತ್ರದ ಶುಭಮುಹೂರ್ತದಲ್ಲಿ ಅದನ್ನು ಸೇವಿಸಿದರೆ ಗಂಡುಮಗುವಾಗುವುದು ಗ್ಯಾರಂಟಿ ಎನ್ನುತ್ತದೆ ಈ ಪುಸ್ತಕ.
ಈ ಪುಸ್ತಕದಲ್ಲಿಯ ವಿಷಯಗಳ ಬಗ್ಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ರೋಗನಿಧಾನ ತಂತ್ರಜ್ಞಾನ ಕಾಯ್ದೆ (ಪಿಸಿಪಿಎನ್‌ಡಿಟಿ)ಯ ಜಿಲ್ಲಾ ಉಸ್ತುವಾರಿ ಮಂಡಳಿಯ ಸದಸ್ಯ ಗಣೇಶ ಬೋರ್ಹಡೆ ಇತ್ತೀಚಿಗೆ ಆಕ್ಷೇಪಗಳನ್ನೆತ್ತಿದ್ದಾರೆ. ಅವರು ನ್ಯಾಯವಾದಿ ವರ್ಷಾ ದೇಶಪಾಂಡೆಯವರ ಲೇಕ್ ಲಡಕಿ ಅಭಿಯಾನದೊಂದಿಗೂ ಗುರುತಿಸಿಕೊಂಡಿದ್ದಾರೆ.
ಬಿಎಎಂಎಸ್ ಪದವಿ ಪಡೆದಿರುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ಮುಂಬೈ, ಪುಣೆ ಮತ್ತು ನಾಸಿಕ್‌ಗಳಂತಹ ನಗರಗಳಲ್ಲಿಯೂ ಹುಲುಸಾದ ವ್ಯಾಪಾರವಿದೆ. ಎಷ್ಟೋ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಲೋಪತಿಯನ್ನು ತೊರೆದು ಆಯುರ್ವೇದದತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಂತಹ ವಿಷಯಗಳನ್ನು ಕಲಿಸಿದರೆ ದೇವರೇ ಈ ಸಮಾಜವನ್ನು ರಕ್ಷಿಸಬೇಕು ಎಂದು ಅವರು ಹೇಳಿದರು. ಪುಸ್ತಕದಲ್ಲಿಯ ಇಂತಹ ವಿಷಯಗಳು ಹೆಣ್ಣು ಭ್ರೂಣ ಹತ್ಯೆಯನ್ನು ಬೆಂಬಲಿಸುತ್ತವೆ ಎಂದು ಅವರು ಬೆಟ್ಟು ಮಾಡಿದರು.
ಪಠ್ಯಪುಸ್ತಕದಲ್ಲಿಯ ಇಂತಹ ಅಸಂಬದ್ಧ ವಿಷಯಗಳನ್ನು ಅವರು ರಾಜ್ಯದಲ್ಲಿಯ ಪಿಸಿಪಿಎನ್‌ಡಿಟಿ ಕಾಯ್ದೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರಾದರೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ವಿಷಯಗಳನ್ನು ಪಠ್ಯಪುಸ್ತಕದಿಂದ ಕೈಬಿಡುವ ಸಾಧ್ಯತೆಗಳಿಲ್ಲ. ಪಠ್ಯಕ್ರಮವು ಪಿಸಿಪಿಎನ್‌ಡಿಟಿ ಕಾಯ್ದೆ ಯನ್ನು ಉಲ್ಲಂಘಿಸಿರುವ ಕುರಿತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳಬೇಕು. ಆದರೆ ಜುಲೈನಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತದೆ ಮತ್ತು ಸರಕಾರದ ಬಳಿ ಕ್ರಮ ಕೈಗೊಳ್ಳಲು ಸಾಕಷ್ಟು ಕಾಲಾವಕಾಶವೂ ಇಲ್ಲ.
‘‘ಅಕ್ಕಿಹುಡಿಯನ್ನು ನೀರಿನಲ್ಲಿ ಬೇಯಿಸಿ ಮತ್ತು ಅದು ಬೇಯುತ್ತಿರುವಾಗ ಮಹಿಳೆ ಅದರ ಆವಿಯನ್ನು ಮೂಗಿನಿಂದ ಹೀರಬೇಕು. ಬಳಿಕ ಬೆಂದ ಹುಡಿಗೆ ನೀರನ್ನು ಸೇರಿಸಿ ಹತ್ತಿಯ ಉಂಡೆಯೊಂದನ್ನು ಅದರಲ್ಲಿ ಅದ್ದಬೇಕು. ಮಹಿಳೆಯು ತನ್ನ ತಲೆಯು ನೆಲಕ್ಕೆ ತಾಗುವಂತೆ ಹೊಸ್ತಿಲಿನ ಮೇಲೆ ಮಲಗಿಕೊಳ್ಳಬೇಕು. ಈಗ ಹತ್ತಿ ಉಂಡೆಯಿಂದ ದ್ರವವನ್ನು ಆಕೆಯ ಮೂಗಿನ ಹೊಳ್ಳೆಗಳಲ್ಲಿ ಸುರಿಯಬೇಕು. ಅದನ್ನು ಹೊರಗೆ ಹಾಕಬಾರದು, ಅದನ್ನು ನುಂಗಬೇಕು ’’ ಇದು ಗಂಡು ಮಗುವನ್ನು ಪಡೆಯಲು ಪಠ್ಯದಲ್ಲಿ ಹೇಳಿರುವ ಇನ್ನೊಂದು ವಿಧಾನ. ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಇಂತಹ ಕಾಗಕ್ಕ-ಗುಬ್ಬಕ್ಕನ ಕಥೆಗಳಂತಹ ವಿಷಯಗಳಿಂದ ವಿದ್ಯಾರ್ಥಿಗಳಿಗೆ ಅಥವಾ ಸಮಾಜಕ್ಕೆ ಏನು ಪ್ರಯೋಜನ ಎನ್ನುವುದು ಬೋರ್ಹಡೆಯವರ ಪ್ರಶ್ನೆ.
ಬಿಎಎಂಎಸ್ ಪಠ್ಯಕ್ರಮವನ್ನು ಕೇಂದ್ರದ ಆಯುಷ್ ಸಚಿವಾಲಯವು ನಿರ್ಧರಿಸುತ್ತದೆ. ನಾವು ಈ ಆಕ್ಷೇಪಾರ್ಹ ವಿಷಯಗಳ ಬಗ್ಗೆ ಅದಕ್ಕೆ ಪತ್ರ ಬರೆದಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮಹಾರಾಷ್ಟ್ರ ವೈದ್ಯಕೀಯ ವಿಜ್ಞಾನಗಳ ವಿವಿಯ ಕುಲಪತಿ ಡಾ.ದಿಲೀಪ ಮಾಶೇಲ್ಕರ್ ಸಮಜಾಯಿಷಿ ನೀಡಿದ್ದಾರೆ.